11ರಿಂದ ಅರಿವಳಿಕೆ ಶಾಸ್ತ್ರಜ್ಞರ ಸಂಘದ ವಾರ್ಷಿಕ ಸಮಾವೇಶ

Published on

ಮೈಸೂರು: ಭಾರತೀಯ ಅರಿವಳಿಕೆ ಶಾಸ್ತ್ರಜ್ಞರ ಸಂಘ(ಐಎಸ್‌ಎ) ರಾಜ್ಯ, ನಗರ ಸಮಿತಿ ವತಿಯಿಂದ 38ನೇ ದಕ್ಷಿಣ ವಲಯ ಮಟ್ಟದ ವಾರ್ಷಿಕ ಮಹಾ ಸಮಾವೇಶವನ್ನು ಆ.11ರಿಂದ 13ರವರೆಗೆ ಮೈಸೂರು ವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ನೂತನ ಗ್ರಂಥಾಲಯ ಸಂಕೀರ್ಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.


ರೋಗಿಗಳ ಸುರಕ್ಷತೆ, ಇತ್ತೀಚಿನ ಪ್ರಗತಿಗಳ ಕುರಿತು ಮೂರು ದಿನಗಳ ಸುದೀರ್ಘ ಚರ್ಚೆ, ಸಂವಾದ ನಡೆಯಲಿದೆ. ಅಂತಾರಾಷ್ಟ್ರೀಯ, ರಾಷ್ಟ್ರಮಟ್ಟದ 150ಕ್ಕೂ ಹೆಚ್ಚು ಅರಿವಳಿಕೆ ತಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳಿಂದ ಸುಮಾರು 1,500 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ಐಎಸ್‌ಎ ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿ ಡಾ.ಎಚ್.ಜಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಸಿ ಅರಿವಳಿಕೆ, ಅಲ್ಟ್ರಾಸೌಂಡ್, ಟ್ರಾಮಾ, ತ್ರೀವ ನಿಗಾ ಕ್ಷೇತ್ರ, ಪುನಶ್ಚೇತನ ಕ್ರಿಯೆ, ಪ್ರಸೂತಿ ಅರಿವಳಿಕೆ, ನೋವು ರಹಿತ ಹೆರಿಗೆ, ಮಕ್ಕಳ ಅರಿವಳಿಕೆ ಕುರಿತು ವಿಷಯ ಮಂಡನೆಯಾಗಲಿದೆ. ಆ.11ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಣಿ, ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವಿ.ಭೀಮೇಶ್ವರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net