ಮೈಸೂರು: ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಫೆ.11ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ನಗರ, ವಿವಿಧ ತಾಲೂಕಿನಲ್ಲಿರುವ ನ್ಯಾಯಾಲಯಗಳಲ್ಲಿ ಒಟ್ಟು 1,11,492 ಪ್ರಕರಣಗಳು ವಿಚಾರಣೆಗೆ ಬಾಕಿಯಿವೆ. ಈ ಪೈಕಿ 59,872 ಸಿವಿಲ್ ಪ್ರಕರಣಗಳಾಗಿದ್ದು, 62,403 ಕ್ರಿಮಿನಲ್ ಪ್ರಕರಣಗಳಾಗಿವೆ. ಇವುಗಳಲ್ಲಿ 34,739 ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆಯಿದ್ದು, ಈಗಾಗಲೇ 15,852 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯತೆ ಇರುವ ಪ್ರಕರಣಗಳು ಎಂದು ಗುರುತಿಸಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೋಟಾರು ವಾಹನ ಅಪಘಾತ, ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್, ನ್ಯಾಯಾಲಯಗಳಲ್ಲಿ ದಾಖಲಾಗದೆ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳು, ಇತರ ಸಿವಿಲ್ ಪ್ರಕರಣಗಳನ್ನು ರಾಜಿಯಾಗಬಲ್ಲ ಪ್ರಕರಣಗಳು ಎಂದು ಗುರುತಿಸಲಾಗಿದೆ. ಲೋಕ ಅದಾಲತ್‌ನಿಂದ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಇಲ್ಲಿ ರಾಜಿಯಾದ ಪ್ರಕರಣಗಳಲ್ಲಿ ಮಾಡಿದ ಆದೇಶಕ್ಕೆ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸುವ ಪ್ರಕರಣದಲ್ಲಿ ನೀಡಿದ ಆದೇಶದಷ್ಟೇ ಮಹತ್ವ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅದಾಲತ್‌ನಿಂದ ಸಮಯ ಉಳಿಯುವ ಜತೆಗೆ ಕಕ್ಷಿದಾರರ ಮಧ್ಯದ ಸಂಬಂಧ ಚೆನ್ನಾಗಿ ಉಳಿಯುತ್ತದೆ. ಯಾವುದೇ ಕೋರ್ಟ್ ಫೀ ಕಟ್ಟಬೇಕಿಲ್ಲ. ಮಧ್ಯವರ್ತಿಗಳಿಲ್ಲದೆ ಎರಡು ಕಡೆಯವರು ನೇರವಾಗಿ ಭಾಗವಹಿಸಬಹುದು. ಪ್ರಕರಣ ರಾಜಿಯಾದಲ್ಲಿ ಶೇ.100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಲೋಕ ಅದಾಲತ್ ಅವಾರ್ಡ್ (ಆದೇಶ) ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
1.45 ಕೋಟಿ ರೂ. ದಂಡ ಸಂಗ್ರಹ
ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವಾಹನ ಸವಾರರಿಗೆ ದಂಡ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಿರುವುದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ಮೈಸೂರು ನಗರದಲ್ಲಿ 2019-22ರ ನವೆಂಬರ್‌ವರೆಗೆ ಒಟ್ಟು 25,51,048 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದು, 127,82,93,700 ಕೋಟಿ ರೂ. ದಂಡ ಬಾಕಿ ಇದೆ. ಫೆ.3ರಿಂದ 7ರವರೆಗೆ 69,719 ಪ್ರಕರಣಗಳಿಂದ 1,46,73,800 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ. ಫೆ.11ರವರೆಗೆ ರಿಯಾಯಿತಿ ಇದ್ದು, ವಾಹನ ಸವಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅವಧಿ ಮುಗಿದ ಬಳಿಕ ಪೂರ್ಣ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಉಪಾಧ್ಯಕ್ಷ ಶಿವಣ್ಣೇಗೌಡ ಇದ್ದರು.