11ಕ್ಕೆ ಮಠಾಧೀಶರ ಚಿಂತನಾ ಸಮಾವೇಶ

8-66
ಬೆಳಗಾವಿ ಶಿವಬಸವ ನಗರದ ನಾಗನೂರು ದ್ರಾಕ್ಷಿಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಮಹಾಂತೇಶ ಕವಟಗಿಮಠ, ಗುರುಸಿದ್ದ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಮಹಾಂತ ಸ್ವಾಮೀಜಿ ಇತರರಿದ್ದರು.
Published on

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ನ.11ರ ಬೆಳಗ್ಗೆ 10.30ಕ್ಕೆ ಮಠಾಧೀಶರ ಬೃಹತ್ ಚಿಂತನಾ ಸಮಾವೇಶ ಹಾಗೂ ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ನಾಗನೂರ ರುದ್ರಾಕ್ಷಿ ಮಠದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಪ್ರಭಾಕರ ಕೋರೆ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಕೆಎಲ್‌ಇ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರನ್ನು ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಕೆಎಲ್‌ಇ ಸಂಸ್ಥೆಯು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಡಾ. ಪ್ರಭಾಕರ ಕೋರೆ ಅವರ ಕರ್ತವ್ಯ ಶಕ್ತಿ, ನಿಸ್ವಾರ್ಥ ಸೇವೆ, ಕಠಿಣ ಶ್ರಮದಿಂದಾಗಿ ಈ ಸಂಸ್ಥೆಯು ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದುಕೊಂಡಿದೆ. ಡಾ.ಕೋರೆ ಅವರ ಅವಿರತ ಪರಿಶ್ರಮ, ಧೈರ್ಯ ಮತ್ತು ಸಾಹಸಗಳಿಂದಾಗಿ ಸಂಸ್ಥೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ. ಸಂಸ್ಥೆಯನ್ನು ಕಟ್ಟಿರುವ ಸಪ್ತ ಋಷಿಗಳ ಆಸೆಯನ್ನು ಡಾ. ಪ್ರಭಾಕರ ಕೋರೆ ಅವರು ಈಡೇರಿಸಿದ್ದಾರೆ ಎಂದು ಹೇಳಿದರು.

ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಮಹಾಸಂಸ್ಥಾನ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ಗೊ.ರು. ಚನ್ನಬಸಪ್ಪ ಆಶಯ ನುಡಿಗಳನ್ನಾಡಲಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನೇಶ್ವರ ಸ್ವಾಮೀಜಿ, ಶಿವಮೊಗ್ಗ- ಆನಂದಪುರಂ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹೊಸಪೇಟೆ ಹಾಲಕರೆಯ ಕೊಟ್ಟೂರು ಸ್ವಾಮಿಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಮಹಾರಾಷ್ಟ್ರದ ಸೊಲ್ಲಾಪುರ ಗೌಡಗಾಂವ ಸಂಸದ ಹಾಗೂ ಹಿರೇಮಠದ ಡಾ.ಜಯಸಿದ್ಧೇಶ್ವರ ಸ್ವಾಮೀಜಿ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 300 ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಲು ಮಠ-ಮಾನ್ಯಗಳು, ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಇವೆರಡೂ ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸುವ ಜತೆಗೆ ಮುಂಬರುವ ದಿನಗಳಲ್ಲಿ ಆಗಬೇಕಿರುವ ಕೆಲಸಗಳ ಕುರಿತಾಗಿಯೂ ಚರ್ಚಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ. ದಾಸೋಹ ಪರಂಪರೆ ಮೂಲಕ ಮಠಮಾನ್ಯಗಳು ಶಿಕ್ಷಣ ಮೂಲಕ ಮುಂದುವರಿಸಿವೆ. ಹಾಗೆ ಶಿಕ್ಷಣ ಸಂಸ್ಥೆಗಳು ಶಿಕ್ಷಣ ದಾಸೋಹ ಕೆಲಸ ಮಾಡಿಕೊಂಡು ಬರುತ್ತಿದೆ. ಇವರೆಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಡಾ.ಪ್ರಭಾಕರ ಕೋರೆ ಅವರು ಕೆಎಲ್‌ಇ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಅವರನ್ನು ಗೌರವಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ರಾಜಕೀಯ ಉದ್ದೇಶವೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಶೇಗುಣಸಿ ಮಠದ ಮಹಾಂತ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net