

ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿವಿಯನ್ನು ರಾಜ್ಯದಲ್ಲಿಯೇ ಮಾದರಿ ವಿವಿಯನ್ನಾಗಿಸುವ ಗುರಿ ಹೊಂದಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿ ನಿಂತ ಭವ್ಯ ವಿವಿ ಇದಾಗಿದ್ದು ಎಲ್ಲ ಬಗೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಅನುದಾನ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.
ಇರುವಕ್ಕಿಯ ವಿವಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 11ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ,ಸುತ್ತಮುತ್ತಲ ನೈಸರ್ಗಿಕ ಕಾಡು ಮತ್ತು ಅಪ್ಪಟ ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿನ ಈ ವಿವಿ ರೈತರಿಗೆ ಹಲವು ಬಗೆಯಲ್ಲಿ ನೆರವು ನೀಡುತ್ತಿದೆ. ವಿವಿ ಆವರಣದಲ್ಲಿ ಉಪನ್ಯಾಸಕರ ವಸತಿ ಸಮುಚ್ಛಯ ಮತ್ತು ವಿದ್ಯಾರ್ಥಿಗಳಿಗೆ ಬೃಹತ್ ಕ್ರೀಡಾಂಗಣ ನಿರ್ಮಿಸಲಾಗುವುದು. ಸಂಶೋಧನೆ, ರೈತ ಕಲ್ಯಾಣ ಮತ್ತು ಕೃಷಿಯಲ್ಲಿ ವೈಜ್ಞಾನಿಕತೆ ಸಾಕಾರಗೊಳಿಸಲು ಅಗತ್ಯವಾದ ಎಲ್ಲ ಬಗೆಯ ವ್ಯವಸ್ಥೆ ರೂಪಿಸಲಾಗುವುದು. ಈ ಸಂಬಂಧ ಸಚಿವರೊಡನೆ ಚರ್ಚಿಸಿ ದೊಡ್ಡ ಮೊತ್ತದ ಅನುದಾನ ಕೊಡಿಸುವುದಾಗಿ ತಿಳಿಸಿದರು.
ಕೃಷಿ, ತೋಟಗಾರಿಕೆ, ಅರಣ್ಯ ಶಾಸ್ತ್ರ ಮತ್ತು ಸಂಶೋಧನಾ ವಿಭಾಗಗಳು ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿಗೊಳ್ಳಲಿದೆ. ಶಿವಮೊಗ್ಗ ಜಿಲ್ಲೆಯ ಅತಿ ಶ್ರೇಷ್ಠ ಶೈಕ್ಷಣಿಕ ತಾಣವಾಗಿ ಇರುವಕ್ಕಿ ಹೊರಹೊಮ್ಮಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ವಿವಿ ಅಭಿವೃದ್ಧಿಗೆ 100 ಕೋಟಿ ರೂ. ಬೇಡಿಕೆ ಮಂಡಿಸಿದರು. ವಿವಿಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಉಪನ್ಯಾಸಕರ ಸಂಶೋಧನಾ ಸಾಧನೆ ಮತ್ತು ವಿದ್ಯಾರ್ಥಿಗಳ ವಿಶಿಷ್ಟ ಸಾಧನೆ ಬಗ್ಗೆ ವಿವರಿಸಿದರು.
ದೇವರಾಜು ಅರಸು ಪ್ರಶಸ್ತಿ ಪುರಸ್ಕೃತರಾದ ಕಾಗೋಡು ತಿಮ್ಮಪ್ಪ ಅವರಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು. ಡಾ. ಶರಣಬಸಪ್ಪ ದೇಶಮುಖ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ. ಎಸ್.ಶ್ರೀಧರ್ ಅವರಿಗೆ ಅತ್ಯುತ್ತಮ ಸಂಶೋಧಕ ಪ್ರಶಸ್ತಿ, ಡಾ. ಗಣಪತಿ ಅವರಿಗೆ ಅತ್ಯುತ್ತಮ ಹಿರಿಯ ಕ್ಷೇತ್ರಾಧಿಕಾರಿ ಪ್ರಶಸ್ತಿ ಹಾಗೂ ಲೋಹಿತ ಪ್ರಶಾಂತ್, ಭಾಗ್ಯಲಕ್ಷ್ಮೀ, ನಟರಾಜ್ ಮತ್ತು ರಾಧಾ ಅವರಿಗೆ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ವೀರಭದ್ರಪ್ಪ ಪೂಜಾರಿ, ಡಾ. ಪಿ.ಕೆ.ಬಸವರಾಜ್, ಡಾ. ಬಿ.ಕೆ.ಕುಮಾರಸ್ವಾಮಿ, ಡಾ. ಎಂ.ದಿನೇಶ್ ಕುಮಾರ್, ವಿವಿಯ ಹಿರಿಯ ಅಧಿಕಾರಿಗಳಾದ ಡಾ. ಹೇಮ್ಲಾನಾಯ್ಕ, ಡಾ. ದುಶ್ಯಂತ ಕುಮಾರ್, ಡಾ. ಕೆ.ಟಿ.ಗುರುಮೂರ್ತಿ, ಕುಲಸಚಿವ ಡಾ. ಕೆ.ಸಿ.ಶಶಿಧರ ಇತರರಿದ್ದರು.