

ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕ ಆಶ್ರಯದಲ್ಲಿ ಜೂ.29, 30 ರಂದು 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶಲ್ಲಿಕೇರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ತಾತಾಸಾಹೇಬ ಪಿ.ಬಾಂಗಿ ಆಯ್ಕೆಯಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಎರಡು ದಿನ ಸಮ್ಮೇಳನ ಜರುಗಲಿದೆ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ವಿನೂತನವಾದ ಸಾಹಿತಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಕನ್ನಡ ಶಾಲೆಯ ಕಡೆಗೆ, ತಿಂಗಳ ವಿಶೇಷ ಅತಿಥಿ, ಚಿತ್ರಸಂತೆ, ರಂಗ ಚಟುವಟಿಕೆ, ಜಿಲ್ಲಾ ಹಿರಿಯ ಸಾಹಿತಿಗಳ ಸಾಹಿತ್ಯಾವಲೋಕನ, ಜಿಲ್ಲಾ ಮಹಿಳಾ ಸಾಹಿತಿಗಳ ಸಾಹಿತ್ಯಾವಲೋಕನ, ಶಿಕ್ಷಕ ಸಾಹಿತಿಗಳ ಸಮ್ಮೇಳನ, ಸಾಂಸ್ಕೃತಿಕ ಸಮ್ಮೇಳನ, ಕವಿಗೋಷ್ಠಿ, ಕಥಾ ಕಮ್ಮಟ, ದತ್ತಿ ಕಾರ್ಯಕ್ರಮಗಳು ಸೇರಿದಂತೆ ಹಲವು ಕನ್ನಡ ಕೆಲಸಗಳನ್ನು ಕಸಾಪ ಮಾಡುತ್ತಿದೆ ಎಂದರು.
ಪತ್ರಕರ್ತ ಜೀವಣ್ಣ ಮಸಳಿ ಮಹಾಮಂಟಪ, ಹಿರಿಯ ಪತ್ರಕರ್ತ ರಾಮ ಮನಗೂಳಿ ಪ್ರಧಾನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜೂ.29 ರಂದು ಬೆಳಗ್ಗೆ 8 ಗಂಟೆಗೆ ಶಾಸಕ ಎಚ್.ವೈ.ಮೇಟಿ ರಾಷ್ಟ್ರ ಧ್ವಜ, ಶಿವಾನಂದ ಶಲ್ಲಿಕೇರಿ ನಾಡ ಧ್ವಜರೋಹಣ ನೆರವೇರಿಸಲಿದ್ದಾರೆ. 8.30 ಗಂಟೆಗೆ ಕಸಾಪ ಸಭಾಭವನದಿಂದ ಅಂಬೇಡ್ಕರ ಭವನದ ವರೆಗೆ ಮೆರವಣಿಗೆ ಜರುಗಲಿದ್ದು, ಯುವ ನಾಯಕ ಸಂತೋಷ ಹೊಕ್ರಾಣಿ, ರವಿ ಕುಮಟಗಿ ಭುವನೇಶ್ವರಿ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನ್ಯಾಯವಾದಿ ರಮೇಶ ಬದ್ನೂರ ಮೆರವಣಿಗೆ ಚಾಲನೆ ನೀಡಲಿದ್ದಾರೆ. ನಗರಸಭೆ ಸದಸ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
10.30 ಗಂಟೆಗೆ ಕುಂ. ವೀರಭದ್ರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಆಶಯನುಡಿ ಹೇಳಲಿದ್ದಾರೆ. ಸಚಿವ ಆರ್.ಬಿ.ತಿಮ್ಮಾಪುರ ರಜತ ಕೋಟೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಪುಸ್ತಕ ಮಳಿಗೆ, ಸಂಸದ ಪಿ.ಸಿ.ಗದ್ದಿಗೌಡರ ವಿವಿಧ ಮಳಿಗೆ ಉದ್ಘಾಟಿಸಲಿದ್ದಾರೆ. ಶಾಸಕ ಜೆ.ಟಿ.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ವಿ.ಪ ಸದಸ್ಯರಾದ ಪ್ರಕಾಶ ಹುಕ್ಕೇರಿ, ಹನುಮಂತ ನಿರಾಣಿ, ಸುನೀನಗೌಡ ಪಾಟೀಲ ಇತರರು ಭಾಗವಹಿಸಲಿದ್ದಾರೆ. ಅಂದು 12.30 ಗಂಟೆಗೆ ಜಿಲ್ಲೆಯ ರಜತ, ರಾಜ್ಯದ ಸುವರ್ಣ-ದೇಶದ ಅಮೃತ ಮಹೋತ್ಸವ, 1.30 ಗಂಟೆಗೆ ಸ್ಪಧಾತ್ಮಕ ಪರೀಕ್ಷೆಗಳು, 3 ಗಂಟೆಗೆ ಜನಪದ ಅಂದು-ಇಂದು, 4 ಗಂಟೆಗೆ ಕಥಾ ಓದುಗೋಷ್ಠಿ, 5 ಗಂಟೆಗೆ ಕವಿ ಗೋಷ್ಠಿ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜೂ.30 ರಂದು ಬೆಳಗ್ಗೆ 9.30 ಗಂಟೆಗೆ ಕನ್ನಡ ಸಾಹಿತ್ಯ ಪರಂಪರೇ ಜನಪರ ನಿಲುವುಗಳು, 11 ಗಂಟೆಗೆ ದಮನಿತ ಲೋಕದ ಸಬಲಿಕರಣ, 12 ಗಂಟೆಗೆ ವರ್ತಮಾನದಲ್ಲಿ ಮಹಿಳಾ ಪ್ರಾತಿನಿಧ್ಯ, 1.30 ಗಂಟೆಗೆ ಸಮೂಹ ಮಾಧ್ಯಮ ಸಮಸ್ಯೆಗಳ ಪರಿಹಾರ ಕುರಿತು ಗೋಷ್ಠಿಗಳು ನಡೆಯಲಿವೆ. 2.30 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. 3.30 ಗಂಟೆಗೆ ಬಹಿರಂಗ ಅಧಿವೇಶನ, 4 ಗಂಟೆಗೆ ಗಜಲ್-ಚುಟುಕು ಕುರಿತು ಗೋಷ್ಠಿ ನಡೆಯಲಿದೆ. 5.30 ಗಂಟೆಗೆ ಸಾಧನಕರ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದ್ದು, ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಸಮಾರೋಫ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು. ಕಸಾಪ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಬಾಗಲಕೋಟೆ ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಾಹಿತಿ ಕಿರಣ ಬಾಳವಗೋಳ, ಮುತ್ತು ಬಳ್ಳಾ, ಸಿ.ಎನ್.ಬಾಳಕ್ಕನವರ, ಕೃಷ್ಣಾ ಯಡಹಳ್ಳಿ ಉಪಸ್ಥಿತರಿದ್ದರು.