

ರಾಯಚೂರು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ನಡೆಯುತ್ತಿರುವ 1178 ದಿನಗಳ ಹೋರಾಟಕ್ಕೆ ಮನ್ನಣೆ ನೀಡದ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆ ಅನುಮೋದಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ವರ್ಷಗಟ್ಟಲೇ ಹೋರಾಟ ನಡೆಸಿದವರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಲೋಕಸಭೆಯ ಮುಂಗಾರು ಅಧಿವೇಶನದ ವೇಳೆ ಸಂಸದ ಜಿ.ಕುಮಾರ ನಾಯಕ ಮತ್ತು ತುಕಾರಾಂ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರವು ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿ ಅನುಮೋದನೆ ನೀಡಿಲ್ಲ ಎಂದು ಉತ್ತರ ನೀಡಿದ್ದು, ಏಮ್ಸ್ ಸ್ಥಾಪನೆಗಾಗಿ ಜಿಲ್ಲೆಯಲ್ಲಿ ನಡೆದ ಸುಧೀರ್ಘ ಚಳುವಳಿ ನಿರತ ಹೋರಾಟಗಾರರು ಮಾತ್ರವಲ್ಲ ಜಿಲ್ಲೆಯ ಜನ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಈಗಾಗಲೇ 22 ಏಮ್ಸ್ ಮಂಜೂರು ಮಾಡಲಾಗಿದೆ. ನಾಲ್ಕು ಹೊರತು ಪಡಿಸಿದರೆ, 18 ಏಮ್ಸ್ ಕಾರ್ಯ ನಿರ್ವಹಿತವಾಗಿವೆ. ಆದರೆ ರಾಜ್ಯದಿಂದ ಬಿಜೆಪಿಗೆ ಅತಿ ಹೆಚ್ಚು ಸಂಸದರನ್ನು ನೀಡುವ ಕರ್ನಾಟಕಕ್ಕೆ ಮಾತ್ರ ಇನ್ನುವರೆಗೂ ಏಮ್ಸ್ ನೀಡದೆ ಇರುವುದು ಗಮನಾರ್ಹ ಸಂಗತಿಯಾಗಿದೆ. ತಲಾ ಆದಾಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಏಮ್ಸ್ ನಂತಹ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ನೀಡಲು ಕೇಂದ್ರ ಸರ್ಕಾರದ ಮೀನಾ-ಮೇಷದಿಂದ ಭಾರಿ ಅಸಮಾಧಾನಕ್ಕೆ ದಾರಿ ಮಾಡಿದೆ.
ಜೋಷಿಯವರ ಮಾತು ನಿಜವಾಯಿತೆ? ಇತ್ತೀಚಿಗೆ ರಾಯಚೂರು ನಗರಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕೇಂದ್ರ ಸರ್ಕಾರ ಏಮ್ಸ್ ಮಂಜೂರು ಪೂರ್ವವಾಗಿ ಸ್ಥಳೀಯ ಮೂಲಭೂತ ಸೌಕರ್ಯ ಮತ್ತು ಇನ್ನಿತರೆ ಅರ್ಹತೆ ಪರಿಗಣಿಸುತ್ತದೆ ಎಂದು ಹೇಳಿದ್ದರು. ಸಾಫ್ಟ್‌ವೇರ್‌ನಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಸಾಧಿಸಿದ, ಅತಿ ಹೆಚ್ಚು ವೈದ್ಯಕೀಯ ಕಾಲೇಜು ಒಳಗೊಂಡ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲಿಯೇ ಗಮನ ಸೆಳೆದ ರಾಜ್ಯಕ್ಕೆ ಏಮ್ಸ್ ನೀಡಲು ಕೇಂದ್ರದ ಮಲತಾಯಿ ಧೋರಣೆ ಏಕೆ ಎನ್ನುವ ಪ್ರಶ್ನೆ ಈಗ ಧ್ವನಿ ಎತ್ತುವಂತೆ. ಏಮ್ಸ್ ಪಡೆಯುವ ಅರ್ಹತೆಯನ್ನು ರಾಜ್ಯ ಹೊಂದಿಲ್ಲವೇ? ಎಂದು ಸಚಿವ ಪ್ರಹ್ಲಾದ ಜೋಶಿಯವರು ಸ್ಪಷ್ಟಪಡಿಸಬೇಕಾಗಿದೆ.
ಸಿಎಂ ಬರೆದ ಪತ್ರ ಏನಾಯಿತು ? ಜಿಲ್ಲೆಯ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಜಿಲ್ಲೆಗೆ ಸ್ಥಾಪನೆ ಮಾಡಲು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರು 2023 ಜುಲೈ 17 ರಂದು ಹಾಗೂ 2024 ರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸೂಖ್ ಎಲ್. ಮಾಂಡವಿಯಾ ಅವರಿಗೆ ಎರಡು ಬಾರಿ ಪತ್ರ ಬರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಿಯೋಗ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಏಮ್ಸ್ ನೀಡಲು ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರು. ಸಂಸದ ಜಿ ಕುಮಾರ್ ನಾಯಕ ಲೋಕಸಭೆಯಲ್ಲಿ ಎರಡು ಸಲ ಪ್ರಶ್ನಿಸಿದ್ದಾರೆ. ಇಷ್ಟೆಲ್ಲ ನಿರಂತರ ಪ್ರಯತ್ನ ನಂತರವೂ ಕೇಂದ್ರ ಮಾತ್ರ ರಾಜ್ಯಕ್ಕೆ ನೀಡಲು ನಿರ್ಧಾರ ಕೈಗೊಳ್ಳದಿರುವುದು, ರಾಜ್ಯದ ಪರ ಸರ್ಕಾರದ ನಿರ್ಲಕ್ಷ ಧೋರಣೆಗೆ ಸ್ಪಷ್ಟ ನಿದರ್ಶನವಾಗಿದೆ.ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಕಳೆದ 1178 ದಿನಗಳಿಂದ ಹೋರಾಟ ಮಾಡಲಾಗುತ್ತಿದ್ದು, ರಾಜ್ಯದಿಂದ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಎರಡು ಬಾರಿ ಪತ್ರ ಬರೆದರು ಸಹ ಕರ್ನಾಟಕದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಹೇಳುತ್ತಿರುವುದು ನಂಬಲಾಗುತ್ತಿಲ್ಲ. ನಾವು ಮಾತ್ರ ಜಿಲ್ಲೆಗೆ ಏಮ್ಸ್ ಸ್ಥಾಪನೆಯಾಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ.
ಡಾ.ಬಸವರಾಜ ಕಳಸ ಸಂಚಾಲಕ ಏಮ್ಸ್ ಹೋರಾಟ ಸಮಿತಿ ರಾಯಚೂರು
ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಜಾರಿ ಮಾಡುವಂತೆ ಕೋರಿ ಏಮ್ಸ್ ಹೋರಾಟಗಾರರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಕೇಂದ್ರವು ಏಮ್ಸ್ ಸ್ಥಾಪನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ರಾಜ್ಯಕ್ಕೆ ಏಮ್ಸ್ ಅನುಮೋದನೆ ನೀಡಿಲ್ಲ ಎಂದು ಹೇಳುತ್ತಿದೆ. ಇದನ್ನು ಜನರು ತಿಳಿದುಕೊಳ್ಳಬೇಕಿದೆ.
ಡಾ.ಶರಣ ಪ್ರಕಾಶ ಪಾಟೀಲ್ ಉಸ್ತುವಾರಿ ಸಚಿವ ರಾಯಚೂರು