ಅಕ್ರಮ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಿ, ಕರವೇ ಪ್ರವೀಣ್ ಶೆಟ್ಟಿ ಬಣ ಪಟ್ಟು ಅಧಿಕಾರಿಗಳಿಗೆ 15 ದಿನಗಳ ಗಡುವು

23 dbp 1
Published on

ದೊಡ್ಡಬಳ್ಳಾಪುರ: ಜಿಲ್ಲೆಯಾದ್ಯಂತ ಅಕ್ರಮ ಕ್ಲಿನಿಕ್, ಆಸ್ಪತ್ರೆಗಳು, ಔಷಧದ ಅಂಗಡಿಗಳು ನಾಯಿಕೊಡೆಗಳಂತೆ ತಲೆಎತ್ತುವ ಮೂಲಕ ಜನರ ಆರೋಗ್ಯದ ಜತೆ ಚೆಲ್ಲಾಟ ಆಡುತ್ತಿವೆ. ಆದ್ದರಿಂದ, ಅವುಗಳ ವಿರುದ್ಧ 15 ದಿನಗಳ ಒಳಗೆ ಕಾನೂನು ಕ್ರಮ ಕೈಗೊಳ್ಳಬೇಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಆಗ್ರಹಿಸಿದರು.

ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕ ತಾಲೂಕು ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಡಿ. ಾರ್ಮಾ ಪ್ರಮಾಣಪತ್ರಗಳನ್ನು ಗುತ್ತಿಗೆ ಪಡೆದು ಔಷಧದ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಇದರಿಂದಾಗಿ ಔಷಧದ ಜ್ಞಾನ ಇಲ್ಲದವರು ಔಷಧ ಮಾರಾಟ ಮಾಡುವಂತಾಗಿದೆ. ಕೆಲವೊಂದು ಅಂಗಡಿಗಳು ಒಂದೇ ಡಿ.ಾರ್ಮಾ ಪ್ರಮಾಣಪತ್ರ ಆಧರಿಸಿ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ವೈದ್ಯರ ಸಲಹೆ ಇಲ್ಲದೆ ಗರ್ಭನಿರೋಧಕ ಮಾತ್ರೆಗಳು, ಕಾಮಪ್ರಚೋದಿತ ಮಾತ್ರೆಗಳನ್ನು ದುಪ್ಪಟ್ಟು ದರಗಳಿಗೆ ಮಾರಲಾಗುತ್ತಿದೆ ಎಂದು ದೂರಿದರು.

ತೀವ್ರಗೊಂಡ ನಕಲಿ ವೈದ್ಯರ ಹಾವಳಿ: ಅಕ್ರಮವಾಗಿ ತಲೆ ಎತ್ತುತ್ತಿರುವ ಔಷಧದ ಅಂಗಡಿಗಳ ಮಾಲೀಕರು ನಕಲಿ ವೈದ್ಯರಿಗೆ ಕ್ಲಿನಿಕ್‌ಗಳನ್ನು ಮಾಡಿಕೊಡುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ ಹೇಳಿಕೊಂಡು ಬರುವವರಿಗೆ ಸ್ಟಿರಾಯ್ಡಿ, ಪೇನ್‌ಕಿಲ್ಲರ್ ಚುಚ್ಚುಮದ್ದು ಕೊಟ್ಟು, ತೀವ್ರ ಸ್ವರೂಪದ ದೈಹಿಕ ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ. ಕೆಪಿಎಂಇ ಮತ್ತು ಪರಿಸರಮಾಲಿನ್ಯ ಮಂಡಳಿಯ ಪರವಾನಗಿ ಇಲ್ಲದೆ ರಾಜಾರೋಷವಾಗಿ ಕ್ಲಿನಿಕ್ ನಡೆಸಲಾಗುತ್ತಿದೆ. ಇವರ ಹಾವಳಿಯನ್ನು ತಡೆಗಟ್ಟಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕೆ ಬರಲು ಆಗ್ರಹ: ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಟಿಎಚ್‌ಒ ಪರಮೇಶ್ವರ್, ಜಿಲ್ಲಾ ನಿಯಂತ್ರಣ ನಿರೀಕ್ಷಕ ಓಂಕಾರೇಶ್ವರ ಸ್ಥಳಕ್ಕೆ ಬಂದು, 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ತಹಸೀಲ್ದಾರ್ ಟಿ.ಎಸ್. ಶಿವರಾಜ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆಯಲಾಯಿತು.

ಕಾನೂನು ಸಲಹೆಗಾರ ಆನಂದ್ ಮಲ್ಲಾತಹಳ್ಳಿ, ತಾಲೂಕು ಕಾರ್ಯದರ್ಶಿ ಜೋಗಳ್ಳಿ ಅಮ್ಮು, ನಗರಾಧ್ಯಕ್ಷ ಶ್ರೀನಗರ ಬಷೀರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಆರ್.ಬಿ. ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net