ಸೋಂಕಿತರಿಗೆ ಕೇರ್ ಸೆಂಟರ್‌ನಲ್ಲಿಯೇ ಚಿಕಿತ್ಸೆ ನೀಡಿ : ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ

05TMK_JCM_Meeting 1
Published on

ತುಮಕೂರು : ನೂತನ ಸಚಿವರಾಗಿ ಪ್ರಮಾಣ ವಹಿಸಿಕೊಂಡು, ಜಿಲ್ಲೆಯಲ್ಲಿ ಕರೊನಾ ಹಾಗೂ ನೆರೆ ನಿರ್ವಹಣೆ ಹೊಣೆಗಾರಿಕೆ ಪಡೆದಿರುವ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಕರೊನಾ ನಿಯಂತ್ರಣಕ್ಕೆ ಸೂಚನೆ ನೀಡಿದರು.

ಸಂಭಾವ್ಯ ಕರೊನಾ ಮೂರನೇ ಅಲೆಯಲ್ಲಿ ಸೋಂಕಿತರನ್ನು ಯಾವುದೇ ಕಾರಣಕ್ಕೂ ಹೋಂ ಕ್ವಾರಂಟೈನ್ ಮಾಡಬಾರದು. ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಹೊರಗಿನಿಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಕೋವಿಡ್ ಲಕ್ಷಣಗಳುಳ್ಳವರನ್ನು ರ‌್ಯಾಟ್ ಅಥವಾ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಇಂದಿನಿಂದಲೇ ಕೋವಿಡ್ ಪರೀಕ್ಷಾ ಪ್ರವಾಣ ಹೆಚ್ಚಿಸಬೇಕು. ಪ್ರತಿನಿತ್ಯ ಗರಿಷ್ಠ ಪ್ರವಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಬೇಕು. ಕೋವಿಡ್ ಹೆಚ್ಚಿರುವ ಪ್ರದೇಶಗಳಲ್ಲಿ ಮನೆ ಮನೆಯಲ್ಲಿಯೂ ಕೋವಿಡ್ ಪರೀಕ್ಷೆ ವಾಡಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕರೊನಾ ಪರೀಕ್ಷೆಯನ್ನೇ ಮಾಡದ ಪ್ರದೇಶಗಳಲ್ಲಿ ಹಾಗೂ ಮಾರುಕಟ್ಟೆ, ಮಂಡಿ, ಸಂತೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬಂದವರಿಗೆ ಮಾತ್ರ ಮಂಡಿಗಳಿಗೆ ಬರಲು ಅವಕಾಶ ನೀಡಬೇಕು ಎಂದರು.

ವ್ಯಾಪಾರಸ್ಥರು, ಸಿಬ್ಬಂದಿ ಕರೊನಾ ನೆಗೆಟಿವ್ ವರದಿ ಹಾಜರುಪಡಿಸಬೇಕು, ಕೋವಿಡ್ ನಿರ್ವಹಣೆಯಲ್ಲಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಮಾಸ್ಕ್ ಧಾರಣೆ ಮತ್ತು ಪರಸ್ಪರ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಕ್ರಮವಹಿಸಬೇಕು. ನಿಯಮ ಮೀರಿದವರ ವಿರುದ್ಧ ಕಾನೂನಿನ್ವಯ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆ ಎಸ್ಪಿ ರಾಹುಲ್ ಕುವಾರ್ ಶಹಪುರವಾಡ್‌ಗೆ ಸೂಚಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಾಸಕ ಡಾ.ರಾಜೇಶ್‌ಗೌಡ, ಎಂಎಲ್‌ಸಿ ಚಿದಾನಂದ ಎಂ.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಇದ್ದರು.

ಕರೊನಾ ಮೂರನೇ ಅಲೆ ತಪ್ಪಿಸಲು ತಜ್ಞರು ನೀಡಿರುವ ಸಲಹೆಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕು. ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು. ಮೊದಲೆರಡು ಅಲೆಯ ಅನುಭವ ಬಳಸಿಕೊಂಡು ಮೂರನೇ ಅಲೆ ನಿಯಂತ್ರಿಸಬೇಕು. ಜೆ.ಸಿ.ಮಾಧುಸ್ವಾಮಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net