

ವಿಜಯವಾಣಿ ಸುದ್ದಿಜಾಲ ತುಮಕೂರು
ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11,447 ಕೋಟಿ ರೂ. ರಾಜ್ಯ ಸರ್ಕಾರ ಆಯವ್ಯಯದಲ್ಲಿ ಮೀಸಲಿಡಲಾಗಿದ್ದು, ಜಾತಿಗಣತಿ ಆಧಾರದ ಮೇಲೆ ಶೇ.3ರಷ್ಟಿದ್ದ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕೆ ಅನ್ವಯವಾಗುವಂತೆ ಶೇ.7.5ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಸಮುದಾಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನೂ ಸರ್ಕಾರ ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಬಾಲ ಭವನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೃಹಸಚಿವರು, ಸ್ವಾವಲಂಬಿ ಬದುಕು ನಡೆಸಲು ಪರಿಶಿಷ್ಟ ವರ್ಗದ ಸುಮಾರು 5,000 ಯುವಕ, ಯುವತಿಯರಿಗೆ ವಿವಿಧ ತರಬೇತಿ ನೀಡಲಾಗಿದೆಯಲ್ಲದೆ 74,367 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಬುಡಕಟ್ಟು ಸಮುದಾಯದ 48,000 ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸುಮಾರು 140 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಬುದ್ಧ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜತೆಗೆ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪರಮೇಶ್ವರ ಅವರು ಭರವಸೆ ನೀಡಿದರು.
ಮಹರ್ಷಿ ವಾಲ್ಮೀಕಿ ಸೂರ್ಯ-ಚಂದ್ರರಿರುವವರೆಗೆ ಮನುಕುಲದ ಜತೆ ಇರುತ್ತಾರೆ. ಸಾಮಾನ್ಯ ವ್ಯಕ್ತಿಯಾಗಿದ್ದ ರತ್ನಾಕರ ಪರಿವರ್ತನೆ ಹೊಂದಿ ವಾಲ್ಮೀಕಿಯಾಗಿ 24,000 ಶ್ಲೋಕಗಳುಳ್ಳ ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ರಾಮಾಯಣ ಕೃತಿ ಮೂಲಕ ಮನುಷ್ಯ ಜೀವನ ಸತ್ಯ ಮತ್ತು ಧರ್ಮದ ಆಧಾರದ ಮೇಲೆ ನಿಂತಿದೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲಿಯೂ ದುಷ್ಟ ಗುಣಗಳಿರುತ್ತವೆ. ನಮ್ಮಲ್ಲಿರುವ ದುಷ್ಟಗುಣ ಸಂಹಾರ ಮಾಡಿ ಉತ್ತಮಗುಣ ಮೈಗೂಡಿಸಿಕೊಳ್ಳಬೇಕು ಎಂದು ಮಹಾಗ್ರಂಥ ರಾಮಾಯಣದ ಸಾರ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿ ರಥದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಶುಭಕಲ್ಯಾಣ್ ಚಾಲನೆ ನೀಡಿದರು. ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಶೋಕ ರಸ್ತೆ, ಟೌನ್ಹಾಲ್ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಬಾಲಭವನ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ.ಪುರುಷೋತ್ತಮ ಮತ್ತಿತರರು ಇದ್ದರು.
ಪ್ರತಿಭಾ ಪುರಸ್ಕಾರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎನ್.ಎಸ್.ಧನುಷ್, ವೈ.ಕಾವ್ಯ, ಕೆ.ಎಸ್.ಚರಣ್ರಾಜ್, ಸಾನ್ವಿ, ಬಿಂದು, ಡಿ.ಎ.ಪುನೀತ್, ಓ.ಭಾರ್ಗವಿ, ಸಿ.ಎಲ್.ಚೇತನ, ಭಾನುಪ್ರಕಾಶ್, ಪುಷ್ಪಲತಾ, ಎಂ.ಸೃಷ್ಟಿ, ದೀಪ್ತಿಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ತುಮಕೂರು ಶೈಕ್ಷಣಿಕ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಮೇಲನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಎಚ್.ವಿ.ಸ್ಫೂರ್ತಿ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕು ಭುವನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಡಿ.ಜೆ.ನವ್ಯಶ್ರೀ ಅವರಿಗೆ ಹಲಗಲಿ ಬೇಡರ ದಂಗೆಯಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಸ್ಮರಣಾರ್ಥ 1 ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಂತರ್ಜಾತಿ ವಿವಾಹವಾದ ತುಮಕೂರಿನ ಎಂ.ಪುಷ್ಪಲತಾ ಹಾಗೂ ಸಂಜಯ್ ದಂಪತಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಸಮಸಮಾಜ ನಿರ್ಮಾಣವಾಗಲಿ: ಸುಮಾರು 5000 ವರ್ಷಗಳ ಹಿಂದೆ ಹುಟ್ಟಿದ ವರ್ಣಾಶ್ರಮ ಪದ್ಧತಿಯಿಂದ ಶ್ರಮಿಕ ವರ್ಗದವರನ್ನು ಕೆಳಸ್ತರದವರೆಂದು ಗುರುತಿಸಿರುವುದು ನಮ್ಮ ದೌರ್ಭಾಗ್ಯ. ಶ್ರಮಿಕ ವರ್ಗದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕೆಳಸ್ತರದವರನ್ನು ಮೇಲ್ಪಂಕ್ತಿಗೆ ತರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸಮಾನತೆ ಹಕ್ಕನ್ನು ನೀಡಲಾಗಿದೆ. ಆದರೂ ಸಮಾಜದಲ್ಲಿ ಮೇಲ್ವರ್ಗ, -ಕೆಳವರ್ಗವೆಂಬ ತಾರತಮ್ಯ, ದಲಿತರ ಶೋಷಣೆ ಇನ್ನೂ ನಿಂತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ಜಾತಿಯಿಂದ ಗುರುತಿಸುವುದು ನಿಂತಾಗ ಮಾತ್ರ ಸಮ ಸಮಾಜ ನಿಮಾರ್ಣ ಸಾಧ್ಯ. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿಯಂತಹ ಮಹನೀಯರ ಜಯಂತಿಯನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಮೇಲು-&ಕೀಳು ಭಾವನೆ ತೊರೆದು ಎಲ್ಲರೂ ಸಮಾನರೆಂಬ ಭಾವ ಮೂಡಿದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ಪರಮೇಶ್ವರ ಹೇಳಿದರು.
ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಮಹಾಗ್ರಂಥವನ್ನು ರಚಿಸುವ ಮೂಲಕ ಆದಿ ಕವಿ ಮತ್ತು ಮಹಾ ಋಷಿ ಎನಿಸಿಕೊಂಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸಿಸುವ ಮೂಲಕ ಧ್ವ್ವನಿ ಇಲ್ಲದವರಿಗೆ ಧ್ವನಿಯಾಗಬೇಕು.| ಶುಭಕಲ್ಯಾಣ್,ಜಿಲ್ಲಾಧಿಕಾರಿ ಸಮಾಜದಲ್ಲಿನ ದ್ವೇಷ, ಅಸೂಯೆ, ಕರುಣೆ, ಪ್ರೀತಿಯ ಪಾತ್ರಗಳನ್ನು ರಾಮಾಯಣದಲ್ಲಿ ತೋರಿಸುವ ಮೂಲಕ ಜೀವನದ ಪ್ರತಿ ಹಂತವನ್ನೂ ಮಹರ್ಷಿ ವಾಲ್ಮೀಕಿ ವಿಸತವಾಗಿ ತಿಳಿಸಿದ್ದಾರೆ. ಇಂಥಹ ಆದರ್ಶಪ್ರಾಯ ವ್ಯಕ್ತಿಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ, ಅವರು ತಿಳಿಸಿದ ಜೀವನ ಮೌಲ್ಯ ಬೆಳೆಸಿಕೊಳ್ಳಬೇಕು.|ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮನುಷ್ಯ ಜೀವನದ ಪರಿಕಲ್ಪನೆಯನ್ನು ತಿಳಿಸಿದ್ದು, ಜೀವನ ರೂಪಿಸಿಕೊಳ್ಳಲು ರಾಮಾಯಣ ಒಳ್ಳೆಯ ನಿದರ್ಶನವಾಗಿದೆ. ಹಿಂದುಳಿದ ಸಮುದಾಯಗಳ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಅಧಿಕಾರಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು.|ಶಾಂತಲಾ, ಮಾಜಿ ಅಧ್ಯಕ್ಷೆ , ಜಿಪಂ