ಸಂಚಾರ ನಿಯಮ ಉಲ್ಲಂಘಿಸಿದ 1,13,004 ಪ್ರಕರಣಗಳ ಫೈನ್ ಪಾವತಿ ಬಾಕಿ

23 Dwd 2A
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಸಂಚಾರ ನಿಯಯ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ವಾಹನಗಳ ಮೇಲೆ ದಾಖಲಾಗಿರುವ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ. ಧಾರವಾಡ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋಬ್ಬರಿ 1,13,004 ಪ್ರಕರಣಗಳ ದಂಡ ಪಾವತಿ ಬಾಕಿ ಇದೆ.

ನಗರದ ಗಲ್ಲಿಗಲ್ಲಿಗಳಲ್ಲಿ ಪೊಲೀಸರು ನಿತ್ಯ ಬಂದೋಬಸ್ತ್ನಲ್ಲಿರುತ್ತಾರೆ. ಸಂಚಾರ ನಿಯಮ ಪಾಲಿಸುವಂತೆ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದಾಗ್ಯೂ ವಾಹನ ಸವಾರರಿಂದ ನಿಯಮ ಉಲ್ಲಂಘನೆ ಅವ್ಯಾಹತವಾಗಿ ಮುಂದುವರಿದಿದೆ. ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವ ಸವಾರರ ಪತ್ತೆಗೆ ಪ್ರಮುಖ ವೃತ್ತಗಳಲ್ಲಿ ಇಲಾಖೆಯಿಂದ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಾಹನಗಳ ಮೇಲೆ ದಿನವಿಡೀ ನಿಗಾ ಇಟ್ಟು ಸಂಚಾರ ನಿಯಮ ಉಲ್ಲಂಘನೆ ಕಂಡುಬ0ದರೆ ಇ- ಚಲನ್ ಸೃಷ್ಟಿಸಿ ಮಾಲೀಕರ ಮನೆಗೇ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ.

ಈ ರೀತಿ ದಂಡಕ್ಕೆ ಗುರಿಯಾದ 1,13,004 ಪ್ರಕರಣಗಳ ಪಾವತಿ ಬಾಕಿ ಇದೆ. ಇವುಗಳ ದಂಡದ ಮೊತ್ತ ಬರೋಬ್ಬರಿ 5,49,98,950 ರೂಪಾಯಿ. ದಂಡದ ಅರ್ಧ ಮೊತ್ತ ಪಾವತಿಗೆ ಸರ್ಕಾರ ಆ. 23ರಿಂದ ಸೆ. 12ರವರೆಗೆ ಅವಕಾಶ ನೀಡಿದೆ. ವಾಹನ ಸವಾರರು ಇದರ ಲಾಭ ಪಡೆದರೆ ಸರ್ಕಾರಕ್ಕೆ 2,74,99,475 ಮೊತ್ತ ಸರ್ಕಾರಕ್ಕೆ ಸಂದಾಯವಾಗಲಿದೆ.

* ದಂಡ ಏಕೆ...?

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಚಾಲನೆ, ಬೈಕ್‌ನಲ್ಲಿ ಮೂವರ ಸಂಚಾರ, ಕಾರ್ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿರುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ವಿವಿಧ ನಿಯಮ ಉಲ್ಲಂಘನೆಗೆ ಇ- ಚಲನ್ ಸೃಷ್ಟಿಯಾಗಿವೆ. ಇವುಗಳ ದಂಡದ ಮೊತ್ತ ಬೇರೆಬೇರೆಯಾಗಿದ್ದು, ವಾಹನ ನೋಂದಣಿ ಸಂಖ್ಯೆಗೆ ವಿವರ ದಾಖಲಾಗಿರುತ್ತದೆ.

ಪೊಲೀಸರಿಂದ ಜಾಗೃತಿ

ಇ- ಚಲನ್‌ಗಳ ಅರ್ಧ ದಂಡ ಪಾವತಿಗೆ ಸಂಚಾರ ಠಾಣೆ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಠಾಣೆಗೆ ಭೇಟಿ ನೀಡಿ, ಅಥವಾ ಪೊಲೀಸರನ್ನು ಸಂಪರ್ಕಿಸಿ ವಾಹನಗಳ ಮೇಲೆ ದಂಡ ದಾಖಲಾಗಿದ್ದರೆ ಖಚಿತಪಡಿಸಿಕೊಳ್ಳಬಹುದು. ಅಥವಾ ಸರ್ಕಾರದ `ಮಾಹಿತಿ ಕಣಜ' ಆ್ಯಪ್ ಮೂಲಕ ಯಾವುದಕ್ಕೆ ಎಷ್ಟು ದಂಡ ಬಾಕಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಸೆ. 12ರವರೆಗೆ ಅರ್ಧ ದಂಡ ಪಾವತಿಗೆ ಅವಕಾಶವಿದ್ದು, ಇದರ ಪ್ರಯೋಜನ ಪಡೆಯಬೇಕು ಎನ್ನುತ್ತಾರೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ ಮೇಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net