

ಬೆಳಗಾವಿ: ಕರೊನಾದಿಂದ ಮೃತಪಟ್ಟ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಕರೊನಾ ಎರಡನೇ ಅಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮರಣ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗದ ಕುಟುಂಬದವರಿಗೆ ಎನ್‌ಎಫ್‌ಎಸ್‌ಡಿಸಿ ಮತ್ತು ಎನ್‌ಬಿಸಿಎಫ್‌ಡಿಸಿ ವತಿಯಿಂದ 5 ಲಕ್ಷ ರೂ. ನೀಡಲಾಗುವುದು. ಇದರಲ್ಲಿ 4 ಲಕ್ಷ ರೂ. ಅವಧಿ ಸಾಲ (ಶೇ. 6ರ ಬಡ್ಡಿ ದರದಲ್ಲಿ) ಮತ್ತು 1 ಲಕ್ಷ ರೂ. ಸಹಾಯಧನ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ.
ಜಾತಿ ಪ್ರಮಾಣಪತ್ರ, ಕುಟುಂಬದ ಆದಾಯ ಪ್ರಮಾಣಪತ್ರ, ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ , ಕುಟುಂಬದ ರೇಷನ್ ಕಾರ್ಡ್, ಮೃತ ವ್ಯಕ್ತಿ ಮತ್ತು ವಾರಸುದಾರರ ಆಧಾರ್ ಕಾರ್ಡ್, ಆರ್‌ಟಿಪಿಸಿಆರ್ ವರದಿ ಹಾಗೂ ಕರೊನಾದಿಂದ ಮೃತಪಟ್ಟಿರುವ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳನ್ನು ಜೂ. 24ರೊಳಗೆ ಸಲ್ಲಿಸಬೇಕು. ಮೃತ ವ್ಯಕ್ತಿ ಕುಟುಂಬದ ಮುಖ್ಯಸ್ಥನಾಗಿದ್ದು, ದುಡಿಯುವ ವ್ಯಕ್ತಿ ಆಗಿರಬೇಕು. ವಯಸ್ಸು 18ರಿಂದ 60ರೊಳಗೆ ಇರಬೇಕು. ವಾರ್ಷಿಕ ಆದಾಯ 3 ಲಕ್ಷ ರೂ. ಒಳಗಿರಬೇಕು.
ದಾಖಲೆ ಸಲ್ಲಿಸಬೇಕಾದ ವಿಳಾಸ: ಪರಿಶಿಷ್ಟ ಜಾತಿಯವರು ಸುವರ್ಣ ವಿಧಾನಸೌಧದ ಕೊಠಡಿ ಸಂಖ್ಯೆ 123ರಲ್ಲಿರುವ ಜಿಲ್ಲಾ ವ್ಯವಸ್ಥಾಪಕರಿಗೆ ದಾಖಲೆ ಸಲ್ಲಿಸಬೇಕು. ಪರಿಶಿಷ್ಟ ವರ್ಗದವರು ಬೆಳಗಾವಿ ಜಿಲ್ಲಾ ವ್ಯವಸ್ಥಾಪಕರು, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಕೊಠಡಿ ಸಂಖ್ಯೆ 222ಕ್ಕೆ, ಹಿಂದುಳಿದ ವರ್ಗದವರು ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ (ಸುವರ್ಣ ವಿಧಾನ ಸೌಧ ನೆಲಮಹಡಿ) ಸಲ್ಲಿಸಬೇಕು ಎಂದು ಡಿಸಿ ಹಿರೇಮಠ ತಿಳಿಸಿದ್ದಾರೆ.