11,12ರಂದು ಕಲ್ಲುಗುಡ್ಡೆಯಿಂದ ಕೊಪ್ಪದವರೆಗೆ ಜಾಥಾ

jyp raitha
ಕಾಲ್ನಡಿಗೆ ಜಾಥಾದ ಕರಪತ್ರವನ್ನು ಜಯಪುರದಲ್ಲಿ ಬಿಡುಗಡೆ ಗೊಳಿಸಲಾಯಿತು. ನಾಗರಿಕ ಹಿತರಕ್ಷಣಾ ಸಮಿತಿಯ ನಾರಾಯಣ, ಸುಂದರೇಶ್, ಕಿಬ್ಳಿ ಪ್ರಸನ್ನಕುಮಾರ್, ವೆಂಕಟೇಶ್, ಶಿವಶಂಕರ್ ಇತರರಿದ್ದರು.
Published on

ಜಯಪುರ: ಮಲೆನಾಡಿನ ಜನವಿರೋಧಿ ಅರಣ್ಯ ಕಾಯ್ದೆಗಳು, ಕಸ್ತೂರಿ ರಂಗನ್ ವರದಿ ವಿರೋಧಿಸಿ ಮೇಗುಂದಾ ಹೋಬಳಿ ಕಲ್ಲುಗುಡ್ಡೆಯಿಂದ ಕೊಪ್ಪದ ಡಿಎಫ್‌ಒ ಕಚೇರಿವರೆಗೆ ಕಾಲ್ನಡಿಗೆ ಜಾಥಾವನ್ನು ನ.11 ಮತ್ತು 12ರಂದು ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬೆಂಡೆಹಕ್ಕಲು ನಾರಾಯಣ ತಿಳಿಸಿದರು.

ಮಲೆನಾಡಿನ ರೈತರು ಹಾಗೂ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಆಡಳಿತ ವರ್ಗದ ವಿರುದ್ಧ ಜನಜಾಗೃತಿ ಕಾಲ್ನಡಿಗೆ ಜಾಥಾ ನ.11ರಂದು ಬೆಳಗ್ಗೆ 9 ಗಂಟೆಗೆ ಕಲ್ಲುಗುಡ್ಡೆಯಲ್ಲಿ ಆರಂಭಗೊಳ್ಳಲಿದೆ. ಜಯಪುರದಲ್ಲಿ ಮಧ್ಯಾಹ್ನ 2 ಗಂಟೆಗೆ ಬಹಿರಂಗ ಸಭೆ ನಡೆಸಿ, ನಂತರ ನಾರ್ವೆಯಲ್ಲಿ ವಾಸ್ತವ್ಯ ಮಾಡಲಾಗುವುದು. 12ರಂದು ಬೆಳಗ್ಗೆ ಶೃಂಗೇರಿ, ಹರಿಹರಪುರ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದ ರೈತರು, ಕಾರ್ಮಿಕರು ಹಾಗೂ ಅನೇಕ ಸಂಘಟನೆಯವರು ಜಾಥಾದಲ್ಲಿ ಸೇರ್ಪಡೆಗೊಂಡು ಕೊಪ್ಪದ ಅರಣ್ಯ ಇಲಾಖೆ ಕಚೇರಿವರೆಗೆ ತೆರಳಲಿದೆ. ನಂತರ ನಡೆಯುವ ಬಹಿರಂಗ ಸಭೆಯಲ್ಲಿ ಅನೇಕ ಸಂಘಟನೆಯ ಮುಖಂಡರು, ಸರ್ವಪಕ್ಷದ ನಾಯಕರು, ಶಾಸಕರು, ಎಂಎಲ್ಸಿ, ಸಂಸದರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಲೆನಾಡು, ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅತ್ತಿಕುಳಿ ಸುಂದರೇಶ್ ಮಾತನಾಡಿ, ಮಲೆನಾಡಿನ ವಿರುದ್ಧದ ಯೋಜನೆಗಳು ಜಾರಿಯಾದರೆ ಮಲೆನಾಡಿಗರ ಉಳಿವು ಕಷ್ಟಸಾಧ್ಯ. ಹಾಗಾಗಿ ಸರ್ಕಾರಗಳ ವಿರುದ್ಧದ ಪ್ರತಿಭಟನೆಯಲ್ಲಿ ರೈತರು, ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಶೃಂಗೇರಿ ಕ್ಷೇತ್ರ ನಾಗರಿಕ ರೈತ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಹೊಸಳ್ಳಿ ಮಾತನಾಡಿ, ಅರಣ್ಯ ಇಲಾಖೆ, ಸರ್ಕಾರಗಳ ರೈತ ಮತ್ತು ಜನ ವಿರೋಧಿ ನಡೆಗೆ ಪ್ರತಿಭಟನೆಯೇ ಸರಿಯಾದ ಉತ್ತರ. ಜಿಡ್ಡು ಹಿಡಿದಿರುವ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿ, ಜನಪರ ತೀರ್ಮಾನ ಕೈಗೊಳ್ಳುವ ಒತ್ತಡ ತರಬೇಕಾದ ಅನಿವಾರ್ಯತೆ ಇದ್ದು, ಮಲೆನಾಡಿನ ಎಲ್ಲ ಜನಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಜಾಥಾದಲ್ಲಿ ನಾಗರಿಕರು ಭಾಗವಹಿಸಬೇಕು ಎಂದರು.

ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನಕುಮಾರ್, ಕಲ್ಲುಗುಡ್ಡೆ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಸತೀಶ್ ಕಲ್ಲುಗುಡ್ಡೆ, ವೆಂಕಟೇಶ್ ಹಾಗಲಗಂಜಿ, ಅವಿನಾಶ್ ಗಡಿಕಲ್, ಅಭಿಷೇಕ್ ಹೇರೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net