ಮಾತೃ ಹೃದಯಿ ಕೆ.ವಿ.ಶಂಕರಗೌಡರು: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬಣ್ಣನೆ

110th birth anniversary of K.V.Shankaragowda Mandya
Published on

ಮಂಡ್ಯ: ಮಂಡ್ಯ ರಾಜಕೀಯದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದ ಕೆ.ವಿ.ಶಂಕರಗೌಡರು ಸರ್ವರನ್ನು ಪ್ರೀತಿಸುತ್ತಿದ್ದ ಮಾತೃ ಹೃದಯಿಯಾಗಿದ್ದರು ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬಣ್ಣಿಸಿದರು.

ತಾಲೂಕಿನ ಕೀಲಾರ ಗ್ರಾಮದಲ್ಲಿ ಕ್ಷೀರಸಾಗರ ಮಿತ್ರಕೂಟ ಹಾಗೂ ಮಂಡ್ಯ ಶುಗರ್ ಸಿಟಿ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ನಿತ್ಯಸಚಿವ ಕೆ.ವಿ.ಶಂಕರಗೌಡರ 110ನೇ ಜನ್ಮೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕೆವಿಎಸ್ ರಾಜಕಾರಣಿ ಮಾತ್ರವಲ್ಲ. ಬದಲಿಗೆ ಶಿಕ್ಷಣ ತಜ್ಞ. ಗ್ರಾಮೀಣ ಭಾಗದ ರೈತರ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಆಶಯದಿಂದ ಪಿಇಎಸ್ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿದರು. ಈ ಮೂಲಕ ಸಹಸ್ರಾರು ರೈತರ ಮಕ್ಕಳು ಉದ್ಯೋಗಸ್ಥರಾಗಲು ಕಾರಣೀಭೂತರಾದರು. ಜತೆಗೆ ಜಿಲ್ಲೆಯ ರಂಗಭೂಮಿ, ಸಹಕಾರ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಮಹಾ ನಾಯಕ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ನಮ್ಮ ತಾತ ಕೆವಿಎಸ್ ಅವರ ಜನ್ಮದಿನವನ್ನು ಪ್ರತಿ ವರ್ಷ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಕ್ಷೀರಸಾಗರ ಮಿತ್ರಕೂಟದ ಕಾರ್ಯವನ್ನು ಶ್ಲಾಘಿಸಿದರು. ನಮ್ಮೂರಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರಂತರವಾಗಿ ನಡೆಯಲಿ. ಇದಕ್ಕೆ ನನ್ನ ಸಹಕಾರ ಇರುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಮಾತನಾಡಿ, ಪಾಲಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ಥಿವಂತರನ್ನಾಗಿ ಮಾಡಿ. ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಉತ್ತಮ ಭವಿಷ್ಯಕ್ಕೆ ಭದ್ರಬುನಾದಿ ಹಾಕಿ. ಇಂತಹ ಒಳ್ಳೆಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವ ಕ್ಷೀರಸಾಗರ ಮಿತ್ರಕೂಟದ ಕೆಲಸ ಉತ್ತಮವಾಗಿದ್ದು, ಪ್ರತಿವರ್ಷ ಇದನ್ನು ಮುಂದುವರೆಸಿಕೊಂಡು ಹೋಗಲು ಸಲಹೆ ನೀಡಿದರು.

ಲಯನ್ಸ್‌ನ ಮಾಜಿ ಪ್ರಾಂತಪಾಲ ಡಾ.ಜಿ.ಎ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಸಂಸ್ಥೆಯು ಕ್ಷೀರಸಾಗರ ಮಿತ್ರಕೂಟ ದ ಜತೆಗೂಡಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಈಗಾಗಲೇ ನಡೆಸುತ್ತಿದ್ದೇವೆ. ಈ ವರ್ಷದಿಂದ ಪ್ರಾರಂಭವಾಗಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರಂತರವಾಗಿ ನಡೆಯಲು ಸಹಕರಿಸಲಾಗುವುದು ಎಂದರು.

ಕ್ಷೀರಸಾಗರ ಮಿತ್ರಕೂಟದ ಪೋಷಕ ಟಿ.ತಮ್ಮಯ್ಯ, ಗೌರವಾಧ್ಯಕ್ಷ ಕೆ.ಪಿ.ವೀರಪ್ಪ, ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಶಿವಶಂಕರ, ಗ್ರಾಪಂ ಸದಸ್ಯ ಕೆ.ಎಸ್.ರಮೇಶ್, ಮಿತ್ರಕೂಟದ ಅಧ್ಯಕ್ಷ ಕೆ.ಜಯಶಂಕರ್, ಕಾರ್ಯದರ್ಶಿ ನಾಗೇಶ್, ಸಂಚಾಲಕ ಕೆ.ಎಂ.ಕೃಷ್ಣೇಗೌಡ, ಆಡಳಿತ ಮಂಡಳಿ ಸದಸ್ಯರಾದ ಕೆ.ಆರ್.ರಮೇಶ್, ಕೆ.ಎಂ.ಶಿವಣ್ಣ, ಕೆ.ಎಂ.ಸುರೇಶ್, ಪ್ರೊ.ಕೆ.ಎಸ್.ಮಾನಸಾ ಇತರರಿದ್ದರು.

ಇದೇ ಸಂದರ್ಭದಲ್ಲಿ ಮಿಮ್ಸ್‌ನ ವೈದ್ಯ ಡಾ.ಕೆ.ಎಲ್.ರವಿಕುಮಾರ್ ಅವರಿಗೆ ಮಿತ್ರಕೂಟದ ಪೋಷಕ ಡಿ.ಶಿವರಾಜು ಅವರು ಉತ್ತಮ ವೈದ್ಯ ಪ್ರಶಸ್ತಿ ಪ್ರದಾನ ಮಾಡಿದರು. ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ದಾನಿಗಳ ನೆರವಿನಿಂದ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕೀಲಾರದ ಶಂಕರ ಮಠದ ಗುರು ಪುತ್ರರು ತತ್ವಪದಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net