ತುಮಕೂರು ಜಿಲ್ಲೆಯಲ್ಲಿ 13 ಮಂದಿ ಸೋಂಕಿನಿಂದ ಸಾವು ; 1984 ಜನ ಆಸ್ಪತ್ರೆಗಳಿಂದ ಬಿಡುಗಡೆ

Coronavirus
Published on

ತುಮಕೂರು : ಜಿಲ್ಲೆಯಲ್ಲಿ ಶನಿವಾರ 1102 ಜನರಿಗೆ ಕರೊನಾ ದೃಢವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಗುಣಮುಖರಾದ 1984 ಜನ ಆಸ್ಪತ್ರೆಗಳಿಂದ ಬಿಡುಗಡೆಯಾದರು. ಪ್ರಸ್ತುತ 14331 ಸಕ್ರಿಯ ಪ್ರಕರಣಗಳು ಉಳಿದುಕೊಂಡಿದ್ದು 175 ಜನರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ ಕೂಡ ಕರೊನಾ ಜಿಲ್ಲೆಯಲ್ಲಿ 13 ಜನರನ್ನು ಬಲಿತೆಗೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 886ಕ್ಕೇರಿದೆ, ಗ್ರಾಮೀಣ ಭಾಗದಲ್ಲಿಯೂ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿದ್ದು ಜನರು ಮತ್ತಷ್ಟು ದಿನ ಎಚ್ಚರಿಕೆಯಿಂದ ಇರುವುದು ಅಗತ್ಯವಿದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡುತ್ತಿದೆ.

ಶಿರಾ ತಾಲೂಕಿನಲ್ಲಿ ಸೋಂಕು ಅಂಕೆ ಮೀರಿದ್ದು ಬರೋಬ್ಬರಿ 222 ಜನರಿಗೆ ಕರೊನಾ ತಗುಲಿದೆ. ಕರ್ಫ್ಯೂ ಕಟ್ಟುನಿಟ್ಟಿನ ಜಾರಿಯಿಂದ ತುಮಕೂರು ನಗರದಲ್ಲಿ ಕರೊನಾ ಹತೋಟಿಗೆ ಬಂದಿದ್ದು 196 ಜನರಿಗೆ ಸೋಂಕು ಕಾಣಿಸಿದೆ, ತುಮಕೂರು ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3060ಕ್ಕಿಳಿದಿದೆ. ಗುಣಮುಖರಾದವರ ಸಂಖ್ಯೆ ಹೆಚ್ಚಿರುವ ಪಾವಗಡ ತಾಲೂಕಿನಲ್ಲಿ ಕನಿಷ್ಟ 604 ಹಾಗೂ ತಿಪಟೂರಿನಲ್ಲಿ 853 ಸಕ್ರಿಯ ಪ್ರಕರಣಗಳಿವೆ. ಶನಿವಾರ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 5, ತುಮಕೂರು 3, ಶಿರಾ 3, ಗುಬ್ಬಿ, ಪಾವಗಡ ತಾಲೂಕಿನಲ್ಲಿ ತಲಾ ಒಬ್ಬರು ಕರೊನಾಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net