11 ಪಂದ್ಯಗಳಲ್ಲಿ 125 ಗೋಲುಗಳ ದಾಖಲೆ

31 gkp 07
Published on

ಪೊನ್ನಂಪೇಟೆ: ಕೊಡವ ಹಾಕಿ ಅಕಾಡೆಮಿ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಪಾಂಡಂಡ ಎಂ. ಕುಟ್ಟಪ್ಪ ಜ್ಞಾಪಕಾರ್ಥ ಆಯೋಜಿಸಿರುವ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಯಲ್ಲಿ ಸೋಮವಾರ 125 ಗೋಲು ದಾಖಲೆ ವಿಶೇಷತೆಗೆ ಸಾಕ್ಷಿಯಾಯಿತು. 11 ಪಂದ್ಯಗಳಲ್ಲಿ ಗೋಲುಗಳ ಸುರಿಮಳೆ ಹಾಕಿಪ್ರಿಯರನ್ನು ರಂಜಿಸಿತು.


ಆಟಗಾರರಾದ ಪೆಮ್ಮಂಡ ಎ.ಸೋಮಣ್ಣ ಎರಡು ಪಂದ್ಯಗಳಲ್ಲಿ ತಲಾ 5 ಗೋಲುಗಳ ಅಮೋಘ ಆಟ, ಬೊಟ್ಟೋಳಂಡ ಸೂರಜ್, ಚೆಪ್ಪುಡೀರ ಸೋಮಯ್ಯ, ಬಿದ್ದಾಟಂಡ ಮೇದಪ್ಪ, ಪಾಲಂದೀರ ಅಪ್ಪಚ್ಚು ತಲಾ 5 ಗೋಲುಗಳ ಸಾಧನೆ, ಚೆಪ್ಪುಡೀರ, ನೆರವಂಡ, ಪಾಲಂದೀರ, ನಾಗಂಡ ಹಾಗೂ ಪೆಮ್ಮಂಡ ತಂಡಗಳ ಎರಡಂಕಿ ಗೋಲು ದಾಖಲೆಯಿಂದಾಗಿ ಶತಕದ ಗೋಲು ಇತಿಹಾಸ ಸೃಷ್ಡಿಸಲು ಸಾಧ್ಯವಾಯಿತು.
ಫಲಿತಾಂಶ: ಬಾರಿಯಂಡವು ಕುಟ್ಟಂಡವನ್ನು 5-4 ಗೋಲುಗಳಿಂದ ಜಯಿಸಿತು. ಬಾರಿಯಂಡ ಬೆಳ್ಯಪ್ಪ 4, ವಿನು 1, ಕುಟ್ಟಂಡ ದಿಲನ್ 2, ಬಿದ್ದಪ್ಪ, ಕವನ್ ತಲಾ ಒಂದೊಂದು ಗೋಲು ಬಾರಿಸಿದರು.


ಬೊಟ್ಟೋಳಂಡ ತಂಡವು ಮುಂಡ್ಯೋಳಂಡವನ್ನು 5-4 ಗೋಲುಗಳಿಂದದ ಮಣಿಸಿತು. ಬೊಟ್ಟೋಳಂಡ ಸೂರಜ್ 5 ಗೋಲು ಸಿಡಿಸಿ ಗೆಲುವು ಸಾಧಿಸಿದರು. ಮುಂಡ್ಯೋಳಂಡ ಅಯ್ಯಪ್ಪ 3, ಮಾಚಯ್ಯ 1 ಗೋಲು ಹೊಡೆದು ಪ್ರತಿಸ್ಪರ್ಧೆ ನೀಡಿದರು. ಅಮ್ಮಣಿಚಂಡಕ್ಕೆ ಮಾಚಿಮಂಡ ವಿರುದ್ಧ 3-2 ಗೋಲುಗಳ ಜಯ ದೊರೆಯಿತು. ಅಮ್ಮಣಿಚಂಡ ಸೋಮಯ್ಯ 2, ಬೋಪಣ್ಣ, ಮಾಚಿಮಂಡ ಚೆಂಗಪ್ಪ, ಆಶಿಕ್ ತಲಾ ಒಂದೊಂದು ಗೋಲು ಬಾರಿಸಿ ತಂಡಕ್ಕೆ ನೆರವಾದರು.


ಚೆಪ್ಪುಡೀರವು ಮೂಕೊಂಡ ವಿರುದ್ಧ 10-6 ಗೋಲುಗಳ ಜಯ ಸಾಧನೆ ಮಾಡಿತು. ಚೆಪ್ಪುಡೀರ ಸೋಮಯ್ಯ 5 ಗೋಲು ದಾಖಲಿಸಿದರು. ಚೆಪ್ಪುಡಿರ ಚಿಣ್ಣಪ್ಪ 3, ಅಯ್ಯಪ್ಪ, ಕಾರ್ಯಪ್ಪ, ಮೂಕೊಂಡ ಅಕ್ಷಿತ್ 3, ಮಿತೇಶ್ 2, ನಿಕಿಲ್ 1 ಗೋಲು ಹೊಡೆದರು. ಪೆಮ್ಮಂಡ ಕೋಡಿಮಣಿಯಂಡವನ್ನು 8-1 ಗೋಲುಗಳಿಂದ ಸೋಲಿಸಿತು. ಪೆಮ್ಮಂಡ ಎ.ಸೋಮಣ್ಣ 5 ಗೋಲು ಸಿಡಿಸಿ ಸಂಭ್ರಮಿಸಿದರು. ಸುಹೇಸ್ 3, ಕೋಡಿಮಣಿಯಂಡ ಪೂಣಚ್ಚ 1 ಗೋಲು ಬಾರಿಸಿದರು.


ಬಿದ್ದಾಟಂಡವು ಚೌರೀರವನ್ನು 5-4 ಗೋಲುಗಳಿಂದ ಸೋಲಿಸಿತು. ಬಿದ್ದಾಟಂಡ ಮೇದಪ್ಪ 5 ಗೋಲು ಹೊಡೆದು ಸಂಚಲನ ಮೂಡಿಸಿದರು. ಚೌರೀರ ಶರತ್ 2, ಪ್ರತಾಪ್, ಡಾನ್ ತಲಾ ಒಂದೊಂದು ಗೋಲು ಬಾರಿಸಿದರು. ಪಾಲಚಂಡಕ್ಕೆ ಮುಕ್ಕಾಟೀರ (ಬೇತ್ರಿ) ವಿರುದ್ಧ 6-5 ಗೋಲುಗಳ ಗೆಲುವು ದೊರೆಯಿತು. ಪಾಲಚಂಡ ಜೋಯಪ್ಪ 4, ಸಜನ್, ಪವನ್ ತಲಾ 1, ಮುಕ್ಕಾಟೀರ ಬೋಪಣ್ಣ 3, ಉತ್ತಪ್ಪ, ಮಂಥನ್ ತಲಾ ಒಂದು ಗೋಲು ಹೊಡೆದರು.


ನೆರವಂಡವು ಚಿಯಕ್‌ಪೂವಂಡವನ್ನು 11-2 ಗೋಲುಗಳಿಂದ ಸೋಲಿಸಿತು. ನೆರವಂಡ ನಾಚಪ್ಪ 4, ದರ್ಶನ್, ದೇವಯ್ಯ ತಲಾ ಎರಡು ಗೋಲು ಹೊಡೆದರು. ಕವನ್, ಪ್ರವೀಣ್, ಬೆಳ್ಯಪ್ಪ, ಚಿಯಕ್‌ಪೂವಂಡ ವಿವೇಕ್, ರೋಹನ್ ತಲಾ 1 ಗೋಲು ಹೊಡೆದರು. ಪಾಲಂದೀರವು ನಾಗಂಡ ವಿರುದ್ಧ 13-12 ಗೋಲುಗಳ ರೋಚಕ ಗೆಲುವು ಪಡೆದುಕೊಂಡಿತು. ಉಭಯ ತಂಡಗಳು ಪಂದ್ಯದುದ್ದಕ್ಕೂ ಗೋಲುಗಳ ಸುರಿಮಳೆಗರೆದವು. ಪಾಲಂದೀರ ಅಪ್ಪಚ್ಚು 5, ಉತ್ತಪ್ಪ 4, ಮುತ್ತಣ್ಣ 3, ನಾಗಂಡ ರಾಜಾ, ನಾಚಪ್ಪ, ಲವ ತಲಾ 4 ಗೋಲು ಸಿಡಿಸಿ ಉತ್ತಮ ಪೈಪೋಟಿ ನೀಡಿದರು.

ಚೆಪ್ಪುಡೀರವು ಅಮ್ಮಣಿಚಂಡವನ್ನು 12-1 ಗೋಲುಗಳ ಅಂತರದಲ್ಲಿ ಮಣಿಸಿತು. ಚೆಪ್ಪುಡೀರ ಸೋಮಣ್ಣ 4, ಚಿಣ್ಣಪ್ಪ, ಕಾರ್ಯಪ್ಪ ತಲಾ 3, ದಿವಾನ್ 2, ಅಮ್ಮಣಿಚಂಡ ಭವನ್ ಏಕೈಕ ಗೋಲು ಹೊಡೆದರು. ಪೆಮ್ಮಂಡಕ್ಕೆ ಬಿದ್ದಾಟಂಡ ವಿರುದ್ಧ 10-5 ಗೋಲುಗಳ ಜಯ ಲಭಿಸಿತು. ಪೆಮ್ಮಂಡ ಎ. ಸೋಮಣ್ಣ 5, ಪಿ.ಯು.ಸೋಮಣ್ಣ 4, ಚರಣ್ 1, ಬಿದ್ದಾಟಂಡ ಚೆಲ್ಸಿ 4, ಸಂಪನ್ 1 ಗೋಲು ಹೊಡೆದರು. ಇಟ್ಟೀರಕ್ಕೆ ಬೊಳಿಯಾಡೀರ ವಿರುದ್ಧ 6-2 ಗೋಲುಗಳ ಜಯ ಲಭಿಸಿತು. ಇಟ್ಟೀರ ಅಚ್ಚಯ್ಯ 3, ಜಗನ್ 2, ಅಚ್ಚಪ್ಪ, ಬೊಳಿಯಾಡೀರ ಚೇತನ್ 2 ಗೋಲು ದಾಖಲಿಸಿದರು.

ಅಂಪೈರ್ ಆಟ: ಚೆಪ್ಪುಡೀರ-ಮೂಕೊಂಡ ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಕೋಡಿಮಣಿಯಂಡ ಗಣಪತಿ, ನಂತರ ನಡೆದ ಪಂದ್ಯದಲ್ಲಿ ತನ್ನ ಕುಟುಂಬದ ತಂಡಕ್ಕೆ ಆಡಿ ಗಮನ ಸೆಳೆದರು. 15 ನಿಮಿಷದಲ್ಲಿ ಪಂದ್ಯದಲ್ಲಿ ತೀರ್ಪುಗಾರನಾಗಿ ಜವಾಬ್ದಾರಿ ನಿಭಾಯಿಸಿ ಮತ್ತೆ 5 ನಿಮಿಷದಲ್ಲಿ ತಂಡದ ಜೆರ್ಸಿ ತೊಟ್ಟು ಆಟವಾಡಿದರು. ಪಂದ್ಯ ಸೋತು ನಿರಾಸೆ ಅನುಭವಿಸಿದರು. ಭಾನುವಾರ ಕೂಡ ಮೇಚಿಯಂಡ ವಿರುದ್ಧ ಆಟವಾಡಿ ಮುಖಕ್ಕೆ ಗಾಯ ಮಾಡಿಕೊಂಡಿದ್ದರೂ ಮತ್ತೆ ಕ್ರೀಡಾಸ್ಫೂರ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net