11 ದಿನಗಳಾದರೂ ಮುಚ್ಚದ ಆಸ್ಪತ್ರೆ, ಡಿಸಿ ಆದೇಶದ ಹೊರತಾಗಿಯೂ ಕಾರ್ಯನಿರ್ವಹಣೆ, ಅಧಿಕಾರಿಗಳ ದ್ವಂದ್ವ ನಿಲುವು

9 dpt 1 arogya barti aspatfre
Published on

ದಾಬಸ್‌ಪೇಟೆ: ಕೋವಿಡ್ ನಿಯಮಗಳ ಉಲ್ಲಂಘನೆ ಹಾಗೂ ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಆರೋಗ್ಯ ಭಾರತಿ ಆಸ್ಪತ್ರೆಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶಿಸಿ 11 ದಿನಗಳಾದರೂ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಕರೊನಾ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಮೇ 28ರಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೂಲಸೌಕರ್ಯ ಕೊರತೆ, ದರಪಟ್ಟಿ ಪ್ರದರ್ಶಿಸದಿರುವುದು ಸೇರಿ ಹಲವು ನ್ಯೂನತೆಗಳು ಗೋಚರವಾಗಿದ್ದವು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಚ್ಚಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಈಗಲೂ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ, ಜಿಲ್ಲಾಧಿಕಾರಿ ಅವರ ಸೂಚನೆಗೆ ಯಾವುದೇ ಬೆಲೆಯೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಿಸ್‌ಗೂ ಸ್ಪಂದನೆ ಇಲ್ಲ: ಜಿಲ್ಲಾಧಿಕಾರಿ ಭೇಟಿ ನಂತರ ತಾಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಭಾರತಿ ಆಸ್ಪತ್ರೆ ವೈದ್ಯರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಆಸ್ಪತ್ರೆಯ ವೈದ್ಯರು ಈವರೆಗೂ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಇದು ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆ ಹಾಗೂ ಬೇಜವಾಬ್ದಾರಿ ತೋರಿಸುತ್ತದೆ ಎಂದು ನಿರ್ಧರಿಸಿ, ಈ ಕುರಿತು ಜಿಲ್ಲಾಧಿಕಾರಿಗೆ ಜಿಲ್ಲಾ ವೈದ್ಯಾಧಿಕಾರಿ ಅವರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಸೂಕ್ತ ಕ್ರಮದ ಭರವಸೆ ನೀಡಿದ್ದರು: ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೆಸ್ವಾಮಿ ಅವರು ಜೂ.4ರಂದು ಆರೋಗ್ಯ ಭಾರತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಜೂ.5ಕ್ಕೆ ಸಭೆ ಇದೆ. ಆ ಸಭೆಯಲ್ಲಿ ಚರ್ಚಿಸಿದ ಬಳಿಕ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಸಭೆ ಮುಗಿದು ನಾಲ್ಕೈದು ದಿನಗಳು ಕಳೆದಿದ್ದರೂ, ಕ್ರಮ ಕೈಗೊಂಡಿಲ್ಲ.

ಜೂ.5ರಂದು ಸಭೆಯಲ್ಲಿ ಆಸ್ಪತ್ರೆಗೆ ದಂಡ ವಿಧಿಸಿ, ಕೆಲದಿನಗಳವರೆಗೆ ಮುಚ್ಚುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಇದರ ಆದೇಶ ಪ್ರತಿಯನ್ನು ತಾಲೂಕು ಆರೋಗ್ಯಾಧಿಕಾರಿ ಅವರಿಗೂ ಕಳುಹಿಸಲಾಗಿದೆ. ಡಾ. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಆರೊಗ್ಯಾಧಿಕಾರಿ ಅವರು ಆಸ್ಪತ್ರೆಯನ್ನು ಕೆಲ ದಿನಗಳವರೆಗೆ ಮುಚ್ಚಿಸಲು ಹೊರಡಿಸಿರುವ ಆದೇಶದ ಪ್ರತಿ ನಮಗೆ ತಲುಪಿಲ್ಲ. ಡಾ.ಹರೀಶ್, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net