11 ಟನ್ ಪ್ಲಾಸ್ಟಿಕ್ ಸಂಗ್ರಹ ಗುರಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾಹಿತಿ ಸ್ವಚ್ಛಭಾರತ್ ಅಭಿಯಾನದಡಿ ಕಾರ್ಯಕ್ರಮ

2bcb7400-a661-4295-b335-c65c04eddf1b
Published on

ಬೆಂಗಳೂರು ಗ್ರಾಮಾಂತರ ಸ್ವಚ್ಛ ಭಾರತ್ ಅಭಿಯಾನದಡಿ ಅಕ್ಟೋಬರ್ 1ರಿಂದ 31ರವರೆಗೆ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಡಿ ಜಿಲ್ಲಾದ್ಯಂತ 11 ಸಾವಿರ ಕೆಜಿ ಪ್ಲಾಸ್ಟಿಕ್ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸ್ವಚ್ಛ ಭಾರತ್ ಅಭಿಯಾನದಡಿ ಅ.1 ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದರು. ಪ್ರತಿ ಗ್ರಾಮದಿಂದಲೂ ಪ್ಲಾಸ್ಟಿಕ್ ಸಂಗ್ರಹ ಮಾಡುವ ಕಾರ್ಯ ನಡೆಯಬೇಕು, ಸ್ಥಳೀಯ ಸಂಸ್ಥೆಗಳ ಮೂಲಕ ಪ್ರತಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ, ಗ್ರಾಮಸ್ಥರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದರು.

ಪಂಚಾಯಿತಿ ಮಟ್ಟದಲ್ಲೇ ವಿಂಗಡಣೆ: ಗ್ರಾಪಂ ಹಂತದಲ್ಲಿಯೇ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು, ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಯಂತ್ರಣ ಸಾಧ್ಯವಾಗಲಿದೆ. ಅ.1ರಂದು ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಎನ್‌ಎಸ್‌ಎಸ್‌ಹಾಗೂ ಯೂತ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಪೂರ್ವ ಸಿದ್ಧ ಮಾಡಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಮಾತನಾಡಿ, ಸ್ವಚ್ಛ ಭಾರತ್ ಅಭಿಯಾನದಡಿ ಸಾರ್ವಜನಿಕ ಸ್ಥಳಗಳನ್ನು ಪ್ಲಾಸ್ಟಿಕ್‌ಮುಕ್ತ ವಲಯಗಳನ್ನಾಗಿ ರೂಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು. ಶಾಲೆಗಳು, ಸಾರ್ವಜನಿಕ ಆಸ್ಪತ್ರೆ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ಸ್ಥಳಗಳು, ರಾಷ್ಟ್ರೀಯ ಹೆದ್ದಾರಿಗಳು ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ವಲಯಗಳನ್ನಾಗಿ ಮಾಡಬೇಕು ಎಂದರು.

ಮಕ್ಕಳಿಗೆ ಚಟವಟಿಕೆ: ಸ್ವಚ್ಛಭಾರತ್ ಅಭಿಯಾನದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಬೀದಿ ನಾಟಕ, ಚಿತ್ರಕಲೆ, ಚರ್ಚಾ ಸ್ಪರ್ಧೆ, ಆಶುಭಾಷಣಾ ಸ್ಪರ್ಧೆ ಸೇರಿ ವಿವಿಧ ಚಟುವಟಿಕೆ ನಡೆಸುವ ಮೂಲಕ ಅರಿವು ಮೂಡಿಸಬೇಕು ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net