

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಪ್ರಸ್ತುತ 11ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ ಡಿ.ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಆರಂಭಗೊಂಡ ಎಸ್‌ಡಿಎಂ ಆಸ್ಪತ್ರೆ ಸದ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುವ ಎಲ್ಲ ಅರ್ಹತೆ ಪಡೆದಿದೆ ಎಂದರು.
ಆಸ್ಪತ್ರೆಯಲ್ಲಿ 20 ತಜ್ಞ ವೈದ್ಯರು, 19 ಸೂಪರ್ ಸ್ಪೆಷಾಲಿಟಿ ವೈದ್ಯರು, 24*7 ಸೇವೆ, ತೀವ್ರ ನಿಗಾ ಘಟಕ, 6 ಹಾಸಿಗೆಗಳ ನವಜಾತ ಶಿಶುಗಳ ತೀವ್ರ ನಿಗಾ ಘಟಕ, 3 ಹಾಸಿಗೆಗಳ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ಡಯಾಲಿಸಿಸ್ ಸೆಂಟರ್, ಫಾರ್ಮಸಿ, ಸಿಟಿ ಸ್ಕಾ್ಯೃನಿಂಗ್, ರಕ್ತ ಪ್ರಯೋಗಾಲಯ, ಎಕ್ಸ್‌ರೇ, ಟಿಎಂಟಿ ಟೆಸ್ಟ್, ಆಂಬುಲೆನ್ಸ್, ಶವ ಸಾಗಾಟಕ್ಕೆ ಮುಕ್ತಿ ವಾಹನ ಲಭ್ಯವಿದೆ. ಖಾಸಗಿ ವಿಮಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಸಹಿತ ವಿವಿಧ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದು ರಹಿತ ಚಿಕಿತ್ಸಾ ಸೌಲಭ್ಯವಿದೆ. ನಗರದ ಹೈಟೆಕ್ ಆಸ್ಪತ್ರೆಗಳ ವೈದ್ಯಕೀಯ ಸೇವೆಯನ್ನು ಇಲ್ಲಿ ಮಿತದರದಲ್ಲಿ ನೀಡಲಾಗುತ್ತಿದೆ ಎಂದರು.
ಆಸ್ಪತ್ರೆಯಲ್ಲಿ 2022ರಲ್ಲಿ 9 ಹಾಸಿಗೆಗಳ ಸುಸಜ್ಜಿತ ಡಯಾಲಿಸಿಸ್ ಸೆಂಟರ್ ಪ್ರಾರಂಭಿಸಲಾಗಿದೆ. ಇದುವರೆಗೆ 7718 ಡಯಾಲಿಸಿಸ್ ಸೇವೆ ನೀಡಲಾಗಿದೆ. ಮಧುಮೇಹಿ ರೋಗಿಗಳ ಕಾಲುಗಳ ಆರೈಕೆಗಾಗಿ ಡಯಾಬಿಟಿಕ್ ಫೂಟ್‌ಕೇರ್ ಸೆಂಟರ್, 29 ಲಕ್ಷ ಮೌಲ್ಯದ ಎರಡು ಬಿಪಿಎಲ್ ಎಲಿಸಾ-600 ವೆಂಟಿಲೇಟರ್ ಸೇವೆ ಲಭ್ಯವಿದೆ ಎಂದರು.
ಆಸ್ಪತ್ರೆ ವತಿಯಿಂದ ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗುತ್ತಿದ್ದು 2023-24ರಲ್ಲಿ 58 ಉಚಿತ ಆರೋಗ್ಯ ತಪಾಸಣಾ ಶಿಬಿರ ಮೂಲಕ 11752 ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. 2024ರಲ್ಲಿ 28,879 ಮಂದಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ಹಾಗೂ 6ಲಕ್ಷ ರೂ. ಮೌಲ್ಯದ ಔಷಧ ನೀಡಲಾಗಿದೆ ಎಂದರು.
ಕೀ ಹೋಲ್ ಸರ್ಜರಿ ಮೂಲಕ ಕಿಡ್ನಿ ಸ್ಟೋನ್ ಸರ್ಜರಿಗಳನ್ನು ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಗರ್ಭಕೋಶದ ಗೆಡ್ಡೆ ಹಾಗೂ ಗರ್ಭಕಂಠದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಆಸ್ಪತ್ರೆಯಲ್ಲಿ ಸಂಪೂರ್ಣ ಮಂಡಿ ಬದಲಿ ಜೋಡಣಾ ಚಿಕಿತ್ಸೆ ಕೂಡ ನಡೆಸಲಾಗುತ್ತಿದೆ. ಹೃದಯದ ಸುತ್ತ ಇರುವ ದ್ರವವನ್ನು ಪೆರಿಕಾರ್ಡಿಯಲ್ ಎಫ್ಯೂಷನ್ ಟ್ಯಾಪಿಂಗ್ ಮೂಲಕ ಹೊರತೆಗೆದು ಅದೆಷ್ಟೋ ರೋಗಿಗಳಿಗೆ ಮರುಜೀವ ನೀಡಲಾಗಿದೆ ಎಂದು ಎಂ.ಜನಾರ್ದನ್ ಹೇಳಿದರು.
ಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ, ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಬೆಳ್ತಂಗಡಿ ದೃಶ್ಯಮಾದ್ಯಮ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಹಣಕಾಸು ನಿರ್ವಹಣಾಧಿಕಾರಿ ನಾರಾಯಣ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಳ, ಕಾರ್ಯದರ್ಶಿ ಗಣೇಶ್ ಶಿರ್ಲಾಲ್, ದೃಶ್ಯಮಾದ್ಯಮ ಸಂಘದ ಅದ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶರತ್ ಗೌಡ ಅವರನ್ನು ಗೌರವಿಸಲಾಯಿತು.
ಬಾಣಂತಿ ಮತ್ತು ನವಜಾತ ಶಿಶುಗಳ ಆರೈಕೆಗಾಗಿ ಸುಸಜ್ಜಿತ ಮತ್ತು ವಿಶೇಷ ಸೌಲಭ್ಯವಿರುವ 8 ಸ್ಪೆಷಲ್ ವಾರ್ಡ್‌ಗಳು ಮತ್ತು ಸಾಮಾನ್ಯ ವಾರ್ಡ್‌ಗಳು. ಇಲ್ಲಿರುವ ಮೂರು ಮಂದಿ ನುರಿತ ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳರೋಗ ತಜ್ಞರ ಮೂಲಕ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಪ್ರತಿದಿನ ವಿಶೇಷ ವೈದ್ಯಕೀಯ ಸೇವೆ ನೀಡಲಾಗುತ್ತ್ತಿದೆ. 2023-24ರಲ್ಲಿ ಆಸ್ಪತ್ರೆಯಲ್ಲಿ 2ಕೋಟಿ 23 ಲಕ್ಷ ರೂ.ಮೌಲ್ಯದ ಔಷಧ ಮತ್ತು ಚಿಕಿತ್ಸೆಯನ್ನು ಬಡರೋಗಿಗಳಿಗೆ ಉಚಿತವಾಗಿ ನೀಡಲಾಗಿದೆ ಎಂದು ಎಂ.ಜನಾರ್ದನ್ ಹೇಳಿದರು.
ರಾಷ್ಟ್ರೀಯ ಮಾನ್ಯತಾ ಮಂಡಳಿನಿಯಮದಂತೆ ವೈದ್ಯಕೀಯ ಸೇವೆ ನೀಡುತ್ತಿರುವ ನಮ್ಮ ಆಸ್ಪತ್ರೆಗೆ ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ(National Accreditation Board for Hospitals -NABH) ಯಿಂದ ಮಾನ್ಯತೆ ದೊರೆತಿದೆ. ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಗುಣಮಟ್ಟ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಉಜಿರೆ ಎಸ್‌ಡಿಎಂಗೆ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ (FOGSI)ದಿಂದ ಮಾನ್ಯತಾ ಪ್ರಮಾಣ ಪತ್ರ ಲಭಿಸಿದೆ ಎಂದರು.