ಜಿಲ್ಲೆಗೆ ಬಂತು 11 ಸಾವಿರ ಕೋವಿಶೀಲ್ಡ್ ಲಸಿಕೆ

13 vikram 14
Published on

ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಗೆ ಬುಧವಾರ ಸಂಜೆ ಆಗಮಿಸಿದ ಕೋವಿಶೀಲ್ಡ್ ಲಸಿಕೆಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಉಪ ವಿಭಾಗಾಧಿಕಾರಿ ಡಾ. ಗೋಪಾಲ ಕೃಷ್ಣ ಬಿ. ಅವರು ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಸ್ವಾಗತಿಸಿದರು.

ಬೆಳಗಾವಿಯಿಂದ ಪೊಲೀಸ್ ಭದ್ರತೆಯಲ್ಲಿ ಲಸಿಕೆ ಹೊತ್ತು ತಂದ ವಾಹನಕ್ಕೆ, ಆರೋಗ್ಯ ಇಲಾಖೆ ಸಿಬ್ಬಂದಿ ಆರತಿ ಬೆಳಗಿ, ಹಾರ ಹಾಕಿ ಸ್ವಾಗತಿಸಿದರು.

ಜಾನಪದ ಕಲಾವಿದ ಶಂಭಯ್ಯ ಹಿರೇಮಠ ನೇತೃತ್ವದ ಕಲಾವಿದರ ತಂಡ ಕೋವಿಡ್ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ವಾಹನವನ್ನು ಜಿಲ್ಲಾ ಲಸಿಕಾ ಉಗ್ರಾಣದವರೆಗೆ ಬರ ಮಾಡಿಕೊಂಡರು.

ನಂತರ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಗೆ 11 ಸಾವಿರ ಕೋವಿಶೀಲ್ಡ್ ಲಸಿಕೆ ಬೆಳಗಾವಿ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಆಗಮಿಸಿದೆ. ರಾಜ್ಯ ಸರ್ಕಾರ ಹೊಸದಾಗಿ ನೀಡಿರುವ ಕೋಲ್ಡ್ ಸ್ಟೋರೇಜ್​ದಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಈಗ ಬಂದಿರುವ ಲಸಿಕೆಯನ್ನು ಜ. 15ರಂದು 7 ವಿತರಣಾ ಕೇಂದ್ರಗಳಿಗೆ ಸರಬರಾಜು ಮಾಡಲಾಗುವುದು ಎಂದರು.

ಜ. 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದು, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಯಲ್ಲೂ ಆನ್​ಲೈನ್ ಮೂಲಕ ಚಾಲನೆ ದೊರೆಯಲಿದೆ. ನಂತರ ಈಗಾಗಲೇ ಉದ್ಘಾಟನೆಗೆ ಸಿದ್ಧಗೊಳಿಸಿರುವ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳ ನೋಂದಾಯಿತ ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬರುವ ಲಸಿಕೆಯನ್ನು ಉಳಿದ ನೋಂದಾಯಿತ ಆರೋಗ್ಯ ಸಿಬ್ಬಂದಿ ಹಾಗೂ ಕರೊನಾ ಸೇನಾನಿಗಳಿಗೆ ನೀಡಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದಿನಕರ, ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ನಿಂಬಣ್ಣವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಅಯ್ಯನಗೌಡರ, ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net