ವಿಧಾನಪರಿಷತ್ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳ ಸೆಣಸಾಟ

MLC election
Published on

ಮೈಸೂರು: ವಿಧಾನಪರಿಷತ್‌ನ ನೈಋತ್ಯ ಪದವೀಧರರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣಾ ಅಖಾಡದ ಸ್ಪಷ್ಟ ಚಿತ್ರಣ ಸೋಮವಾರ ಹೊರಬಿದ್ದಿದೆ.

ನಾಮಪತ್ರ ಪಡೆದುಕೊಳ್ಳಲು ಕೊನೆಯ ದಿನವಾದ ಸೋಮವಾರ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಈ.ಸಿ.ನಿಂಗರಾಜ್‌ಗೌಡ, ಮಂಡ್ಯದ ಕೆ.ಆರ್.ರಾಜು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಕಣದಲ್ಲಿ 11 ಅಭ್ಯರ್ಥಿಗಳು ಉಳಿದಿದ್ದಾರೆ.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಶಿವಮೊಗ್ಗದ ಎಂ.ರಮೇಶ್ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದು, 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂತೆಯೇ, ನೈಋತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಬೆಂಗಳೂರಿನ ಎಂ.ರಂಗಸ್ವಾಮಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಅಂತಿಮವಾಗಿ 10 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ.

ಕಣದಿಂದ ಹಿಂದೆ ಸರಿದ ನಿಂಗರಾಜ್‌ಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಇ.ಸಿ.ನಿಂಗರಾಜ್‌ಗೌಡ ನಾಮಪತ್ರವನ್ನು ವಾಪಸ್ ಪಡೆದು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಬಿಜೆಪಿಯಲ್ಲಿನ ಬಂಡಾಯ ಶಮನವಾದಂತಾಗಿದೆ. ಹೀಗಾಗಿ, ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ನಿಂಗರಾಜ್‌ಗೌಡ ಅವರಿಗೆ ಬಿಜೆಪಿ ಮೊದಲು ಟಿಕೆಟ್ ಘೋಷಿಸಿತ್ತು. ಬಳಿಕ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಆದಾಗ್ಯೂ, ಇವರು ಬಿ-ಫಾರ್ಮ್ ಇಲ್ಲದೆ ನಾಮಪತ್ರವನ್ನು ಸಲ್ಲಿಸಿದ್ದರು. ಹೀಗಾಗಿ, ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ನಾಮಪತ್ರವನ್ನು ವಾಪಸ್ ಪಡೆಯುವಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದರು. ಇದಕ್ಕೆ ಮಣಿದ ನಿಂಗರಾಜ್‌ಗೌಡ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿಯಾಗಿರುವ ಜೆಡಿಎಸ್ ಕೆ.ವಿವೇಕಾನಂದ ಅವರಿಗೆ ಎದುರಾಗಿದ್ದ ಮತ್ತೊಂದು ಅಡ್ಡಿಯೂ ನಿವಾರಣೆಯಾಗಿದೆ.

ಈಗಾಗಲೇ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ನಾಮಪತ್ರವನ್ನು ಸಲ್ಲಿಸದೆ ಚುನಾವಣೆಯಿಂದ ದೂರ ಉಳಿದಿದ್ದರು.

ಕಣದಲ್ಲಿ ಉಳಿದ ಅಭ್ಯರ್ಥಿಗಳು:

ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಕರ್ನಾಟಕ ಜನತಾ ಪಕ್ಷದ ಎಂ.ನಾಗೇಂದ್ರಬಾಬು, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾದ ಡಾ.ಎಸ್.ಅನಿಲ್‌ಕುಮಾರ್, ಎನ್.ಅಂಬರೀಶ್, ನಾಗಮಲ್ಲೇಶ್, ಎಸ್.ನಿಂಗರಾಜು, ಕೆ.ಸಿ.ಪುಟ್ಟಸಿದ್ದಶೆಟ್ಟಿ, ಆರ್.ಮಹೇಶ್, ಕೆ.ರಾಜು ಸೇರಿದಂತೆ 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.

ಬಿಜೆಪಿಗೆ ಬಂಡಾಯದ ಬಿಸಿ

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ನಾಮಪತ್ರವನ್ನು ವಾಪಸ್ ಪಡೆಯದೆ ಪಕ್ಷಕ್ಕೆ ಸವಾಲು ಎಸೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ನಡುವೆ ರಘುಪತಿ ಭಟ್ ಸಹ ಜಯಕ್ಕಾಗಿ ಹೋರಾಟ ನಡೆಸಲಿದ್ದಾರೆ. ಉಳಿದಂತೆ ಸರ್ವ ಜನತಾ ಪಕ್ಷದ ಚನ್ನಗಿರಿ ತಾಲೂಕಿನ ಜಿ.ಸಿ.ಪಟೇಲ್, ಪಕ್ಷೇತರ ಅಭ್ಯರ್ಥಿಯಾಗಿ ಉಳ್ಳಾಲದ ದಿನಕರ್ ಉಳ್ಳಾಲ್, ಶಿವಮೊಗ್ಗದ ಎಸ್.ಪಿ.ದಿನೇಶ್, ಬಂಟ್ವಾಳದ ಬಿ.ಮಹಮ್ಮದ್, ಮಂಗಳೂರಿನ ಶೇಖ್ ಬಾವಾ ಮಂಗಳೂರು, ಶಿವಮೊಗ್ಗದ ಜಿ.ಆರ್.ಷಡಾಕ್ಷರಪ್ಪ, ಷಹರಾಜ್ ಮಜಾಹಿದ್ ಸಿದ್ದಕಿ ಕಣದಲ್ಲಿದ್ದಾರೆ.

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕೈ-ದಳದ ನಡುವೆ ಫೈಟ್


ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ, ಹಾಲಿ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಮತ್ತು ಕಾಂಗ್ರೆಸ್‌ನ ಕೆ.ಕೆ.ಮಂಜುನಾಥ್ ಕುಮಾರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.


ಪಕ್ಷೇತರ ಅಭ್ಯರ್ಥಿಗಳಾದ ತೀರ್ಥಹಳ್ಳಿ ತಾಲೂಕಿನ ಎಚ್.ಟಿ.ಅರುಣ್, ಉಡುಪಿಯ ನರೇಶ್ ಹೆಗ್ಡೆ, ಚಿಕ್ಕಮಗಳೂರಿನ ಬಿ.ಆರ್.ನಂಜೇಶ್, ಕೆ.ಕೆ.ಮಂಜುನಾಥ್, ಕುಂದಾಪುರ ತಾಲೂಕಿನ ಭಾಸ್ಕರ್‌ಶೆಟ್ಟಿ, ಮಂಗಳೂರಿನ ಡಾ.ಎಸ್.ಆರ್.ಹರೀಶ್ ಆಚಾರ್ಯ ಅಖಾಡದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net