

ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಬಳಿಯ 10ಕ್ಕೂ ಹೆಚ್ಚು ಬೀದಿ ಬದಿಯ ತಳ್ಳುವ ಗಾಡಿ, ಗೂಡಂಗಡಿಗಳನ್ನು ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸುವ ಕಾರ್ಯಾಚರಣೆಗೆ ಬುಧವಾರ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಮುಂದಾದರು.
ಯಾವುದೇ ನೋಟಿಸ್ ನೀಡದೆಯೇ ಏಕಾಏಕಿ ತೆರವುಗೊಳಿಸಿದರೆ ಎಲ್ಲಿಗೆ ಹೋಗಬೇಕು. ನಾವೆಲ್ಲ ಬಡವರು ಸ್ವಾಮಿ. ಇದನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಕಾಲವಕಾಶ ನೀಡಿ ಎಂದು ಬೀದಿಬದಿಯ ಮಹಿಳಾ ವ್ಯಾಪಾರಸ್ಥರು ಗೊಗರೆದರು. ಆದರೂ ಕಾರ್ಯಾಚರಣೆ ನಿಲ್ಲಲಿಲ್ಲ.
ಹಿರಿಯೂರು, ಬೆಂಗಳೂರು, ಚಳ್ಳಕೆರೆ, ಮೊಳಕಾಲ್ಮುರು, ಬಳ್ಳಾರಿ, ಪಾವಗಡ ಸೇರಿ ವಿವಿಧೆಡೆ ಸಂಚರಿಸುವ ಅನೇಕ ಪ್ರಯಾಣಿಕರು ಬಸ್‌ಗಳಿಗಾಗಿ ನಿತ್ಯ ಇಲ್ಲಿ ಕಾಯುತ್ತಾರೆ. ಹೀಗಾಗಿ ಸಾರ್ವಜನಿಕ ಶೌಚಗೃಹ ಅಗತ್ಯವಿದ್ದು, ನಿರ್ಮಿಸುವ ಉದ್ದೇಶಕ್ಕಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ನೋಡಿ ನಿಮಗೆ ಸ್ವಲ್ಪ ದೂರದಲ್ಲೇ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸಿ, ಅಲ್ಲಿ ಬೀದಿ ಬದಿ ವ್ಯಾಪಾರ ಕೈಗೊಳ್ಳಲು ಅನುವು ಮಾಡಿಕೊಡಲಾಗುವುದು. ಅಲ್ಲಿಯವರೆಗೂ ನಗರಸಭೆಯೊಂದಿಗೆ ಸಹಕರಿಸಲೇಬೇಕು ಎಂದು ಅಧಿಕಾರಿಗಳು ಸೂಚಿಸಿದರು.