

ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ, ಆಲ್ ಇಂಡಿಯಾ ಟೆಂಟ್ ಆ್ಯಂಡ್ ಡೆಕೋರೇಟರ್ಸ್ ವೆಲ್‌ಫೇರ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೆ.10 ರಿಂದ 12ರವರೆಗೆ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ‘ಮೈಸೂರು ವೈಭವ’ ಹೆಸರಿನಲ್ಲಿ ರಾಜ್ಯ ಮಟ್ಟದ 3ನೇ ಮಹಾ ಅಧಿವೇಶನ ಆಯೋಜಿಸಲಾಗಿದೆ.
ಗುಜರಾತ್, ಮಹಾರಾಷ್ಟ್ರ, ದೆಹಲಿ, ಹೈದರಾಬಾದ್, ಕೇರಳದ ಪ್ರಮುಖ ವ್ಯಾಪಾರಿಗಳಿಂದ ಶಾಮಿಯಾನ, ಕುರ್ಚಿ, ಧ್ವನಿ, ಬೆಳಕು ಸಂಬಂಧಿಸಿದ ವಸ್ತುಗಳು, ಅಲಂಕಾರ ವಸ್ತುಗಳು ಸೇರಿದಂತೆ ಶಾಮಿಯಾನ ಮಾಲೀಕರ ಅನುಕೂಲಕ್ಕಾಗಿ ವಿವಿಧ ಬಗೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇದಕ್ಕಾಗಿ 96 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.10ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪದಾಧಿಕಾರಿಗಳಾದ ಅಬ್ದುಲ್ ರೆಹಮಾನ್ ವಾಂಜಿ, ಶಿವಕುಮಾರ್, ಲಿಂಗಪ್ಪ, ರವೀಶ್, ವಾಸಿಮ್ ಸೇರಿದಂತೆ ಇತರರಿದ್ದರು.