

ಹನೂರು: ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಾಣವಾಗುತ್ತಿರುವ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.
ಮ.ಬೆಟ್ಟದಲ್ಲಿ ಮಹದೇಶ್ವರರ ಪ್ರತಿಮೆ ನಿರ್ಮಾಣ ಮಾಡಬೇಕೆನ್ನುವುದು ಅಂದಿನ ಸಹಕಾರ ಸಚಿವ ದಿ. ಎಚ್.ಎಸ್. ಮಹದೇವಪ್ರಸಾದ್ ಕನಸಾಗಿತ್ತು. ಈ ಹಿನ್ನಲೆ ದೀಪದಗಿರಿ ಒಡ್ಡುವಿನ ಬಳಿ ಪ್ರತಿಮೆ ನಿರ್ಮಾಣ ಸಂಬಂಧ ಕ್ರೀಯಾಯೋಜನೆ ಸಲ್ಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಜಮೀನು ವಿವಾದದಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿವಾದವನ್ನು ಇತ್ಯರ್ಥಪಡಿಸಿಕೊಂಡು ಕಾಮಗಾರಿಯನ್ನು 2020 ಜೂನ್ ತಿಂಗಳಲ್ಲಿ ಪ್ರಾರಂಭಿಸಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಕೆಲಕಾಲ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ನಾಲೈದು ತಿಂಗಳಿನಿಂದ ಕಾಮಗಾರಿ ಭರದಿಂದ ಸಾಗುತ್ತಿದೆ.
ಭಕ್ತರಿಗೆ ಮಾದಪ್ಪನ ಇತಿಹಾಸ:
ದೀಪದಗಿರಿ ಒಡ್ಡುವಿನಲ್ಲಿ 1 ಎಕರೆ ಪ್ರದೇಶದಲ್ಲಿ ಹುಲಿ ವಾಹನ ಒಳಗೊಂಡಂತೆ ಮಹದೇಶ್ವರರ ಪ್ರತಿಮೆ ನಿರ್ಮಾಣವಾಗುತ್ತಿದ್ದು, 27 ಅಡಿ ಎತ್ತರದ ಪೀಠದಲ್ಲಿ 108 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ತಲೆ ಎತ್ತಲಿದೆ. 27 ಅಡಿ ಪೀಠದಲ್ಲಿ 2 ಅಂತಸ್ತಿನ 2 ಗುಹೆ ನಿರ್ಮಾಣವಾಗಲಿದೆ. ಈ ಗುಹೆಗಳಲ್ಲಿ 17 ವಿಭಾಗಗಳನ್ನು ನಿರ್ಮಿಸಲು ಉದ್ಧೇಶಿಸಲಾಗಿದ್ದು, ಇದರಲ್ಲಿ ಭಕ್ತರು ಮಹದೇಶ್ವರರ ಜೀವನ ಚರಿತ್ರೆ, ಗೀತಾ ಗಾಯನಗಳು, ವಿವಿಧ ಅವತಾರದ ಭಾವಚಿತ್ರಗಳು, ಪವಾಡ ಸೃಷ್ಟಿಸಿದ ಇತಿಹಾಸ ಹಾಗೂ ಸ್ವಾಮಿ ಬಗ್ಗೆ ಆಡಿಯೋ, ವಿಡಿಯೋಗಳನ್ನು ಪ್ರದರ್ಶಿಸಲು ಯೋಜನೆ ಸಿದ್ಧಪಡಿಸಲಾಗಿದೆ.
ಪ್ರಾಧಿಕಾರದ ವತಿಯಿಂದ 20 ಕೋಟಿ ರೂ ಅನುದಾನದಲ್ಲಿ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಬೆಂಗಳೂರು ಪಿಎಸ್‌ಎಪಿ ಆರ್ಕಿಟೆಕ್ಟ್ ಸಂಸ್ಥೆಗೆ ನೀಡಿದೆ. ಮಹದೇಶ್ವರ ಸ್ವಾಮಿ ಹಾಗೂ ಹುಲಿಯ ದೇಹದ ಭಾಗ ಪೂರ್ಣಗೊಂಡಿದೆ. ಬಲಗೈಯಲ್ಲಿ ತ್ರಿಶೂಲವನ್ನು ಅಳವಡಿಸಲಾಗಿದೆ. ಹುಲಿಯ ತಲೆಯ ಭಾಗದಲ್ಲಿ ಕಣ್ಣು, ಮೂಗು, ತುಟಿ ಹಾಗೂ ಹಲ್ಲುಗಳು ಆಕರ್ಷಕ ರೀತಿಯಲ್ಲಿ ಮೂಡಿಬಂದಿದೆ. ದೇಹದ ಮೇಲ್ಭಾಗದಲ್ಲಿ ಕಪ್ಪು ಹಳದಿಯ ಕರಕುಶಲತೆ ಕಾರ್ಯ ಬಹು ಸುಂದರವಾಗಿ ಕೆತ್ತನೆಯಾಗಿದೆ. ಕಾಲುಗಳು ಪೂರ್ಣಗೊಂಡಿದ್ದು, ಉಗುರು ಅಳವಡಿಸುವುದು ಬಾಕಿ ಇದೆ. ಜತೆಗೆ ಮಹದೇಶ್ವರ ಮೂರ್ತಿಯ ಮುಖದ ನಿರ್ಮಾಣ ಕಾರ್ಯ ಬಾಕಿ ಇದೆ. ಈ ವರ್ಷದ ಅಂತ್ಯದೊಳಗೆ ಕಾಮಗಾರಿಯು ಪೂರ್ಣಗೊಳ್ಳಲಿದೆ.