

ಗುಂಡ್ಲುಪೇಟೆ: ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ 108 ವಾಹನ ಸಿಗದಂತಾಗಿದ್ದು, ಅಪಘಾತ ಹಾಗೂ ಅನಾರೋಗ್ಯಕ್ಕೊಳ ಗಾದವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕೇರಳ ಹಾಗೂ ಊಟಿಗೆ ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ತಾಲೂಕಿನಲ್ಲಿ ಹಾದು ಹೋಗಿದ್ದು, ಇಲ್ಲಿ ನಿತ್ಯವೂ ಅಲ್ಲಲಿ ಅಪಘಾತಗಳು ಸಂಭವಿಸುತ್ತಿರುತ್ತದೆ. ಅಲ್ಲದೆ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿಯಿಂದ ರೈತರು ಗಾಯಗೊಳ್ಳುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಆದರೆ ಕೆಲವು ಬಾರಿ ಅಪಘಾತ, ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೆ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ 108 ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಿದೆ. ಯಾವುದೇ ಮೂಲೆಯಿಂದ 108ಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಆಗಮಿಸುತ್ತಿದ್ದ ಆಂಬುಲೆನ್ಸ್‌ಗಳು ಈಗ ಗಂಟೆಯಾದರೂ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೆರಿಗೆ, ಅಪಘಾತ ಮುಂತಾದ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಂತಾಗಿದ್ದು, ಇದರಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ತೆರಕಣಾಂಬಿಯ ಪ್ರಾಥಮಿಕ ಆಸ್ಪತ್ರೆ, ಬೇಗೂರು ಹಾಗೂ ಕಬ್ಬಹಳ್ಳಿ ಗ್ರಾಮಗಳ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 108 ವಾಹನವನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ ಎರಡು ಕೆಟ್ಟಿದ್ದರೆ ಇನ್ನೆರಡು ಮಾತ್ರ ಕಾರ್ಯನಿರ್ವಹಿಸುತ್ತಿರುವ ಪರಿಣಾಮ ತೀವ್ರ ಸಂಕಷ್ಟದಲ್ಲಿರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದಂತಾಗಿದೆ.
ತಾಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ, ಹೃದಯಾಘಾತ, ಶಸ್ತ್ರ ಚಿಕಿತ್ಸೆ ಮುಂತಾದ ತುರ್ತು ಸಂದರ್ಭಗಳಲ್ಲಿ ವಾಹನ ಲಭ್ಯವಾಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದ ಎರಡು ಗಂಟೆಗಳ ನಂತರವೂ ಆಂಬುಲೆನ್ಸ್ ಬರದೆ ರೋಗಿಗಳು ಮೃತಪಟ್ಟಿರುವ ಅದಷ್ಟೋ ಉದಾಹರಣೆ ಉಂಟು. ಇಂತಹ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರು ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ. ದುಬಾರಿ ಬಾಡಿಗೆ ತೆತ್ತು ಆಸ್ಪತ್ರೆಗೆ ಕರೆದೊಯ್ದರೂ ವಾಹನದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯಗಳಿಲ್ಲದೆ ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ. ಅಲ್ಲದೆ ಹಲವಾರು ಬಾರಿ ರೋಗಿಗಳ ಜೀವಕ್ಕೆ ಆಪತ್ತು ಸಂಭವಿಸಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರ ಕೊರತೆಯಿಂದ ಅಪಘಾತ, ಹೆರಿಗೆ ಮುಂತಾದ ತುರ್ತು ಚಿಕಿತ್ಸೆ ನೀಡಲು ಮುಂದಾಗುತ್ತಿಲ್ಲ. ಅಂತಹ ರೋಗಿಗಳನ್ನು ಮೈಸೂರು ಇಲ್ಲವೇ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ. ಆದರೆ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು 108 ವಾಹನಗಳು ದೊರಕದಂತಾಗಿದೆ. ಜು.21ರಂದು ಮಧ್ಯಾಹ್ನ 2.30 ರ ಸಮಯದಲ್ಲಿ ತಾಲೂಕಿನ ಬಲಚವಾಡಿ ಸಮೀಪ ಆಟೋ- ಬಸ್ ಡಿಕ್ಕಿ ಸಂಭವಿಸಿ 8ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದರು. 108 ವಾಹನಕ್ಕೆ ಕರೆಮಾಡಿದರೂ ಸಕಾಲಕ್ಕೆ ದೊರಕದ ಕಾರಣ ಬಾಡಿಗೆ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮಹೇಶ್ ಎಂಬ ಗಾಯಾಳು ಮೃತಪಟ್ಟರು. ಬೇರಾವುದೇ ಆಂಬುಲೆನ್ಸ್ ಲಭ್ಯವಿಲ್ಲದ ಕಾರಣ ಸಂಜೆ 5 ಗಂಟೆ ವೇಳೆಗೆ ಬಿಳಿಗಿರಿರಂಗನ ಬೆಟ್ಟದಿಂದ 108 ಬರುವಂತಾಗಿದ್ದರಿಂದ ಎಲ್ಲ 5 ಗಾಯಾಳುಗಳನ್ನು ಒಂದೇ ವಾಹನದಲ್ಲಿ ಕರೆದೊಯ್ಯಬೇಕಾಯಿತು. ಅಲ್ಲಿಯವರೆಗೆ ಗಾಯಾಳುಗಳ ಸ್ಥಿತಿ ವಿಷಮಿಸುವ ಭೀತಿಯಿಂದ ತೆರಕಣಾಂಬಿ ಆಸ್ಪತ್ರೆ ವೈದ್ಯರೇ ಗಾಯಾಳುಗಳಿಗೆ ಹೊಲಿಗೆ ಹಾಕಿ ರಕ್ತಸ್ರಾವ ತಡೆಗಟ್ಟುವಂತಾಯಿತು.
ಸಂಬಳಕ್ಕಾಗಿ ನ್ಯಾಯಾಲಯದ ಮೊರೆಹೋದ ಸಿಬ್ಬಂದಿ: ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಪರಿಣಾಮ ಪ್ರತಿ ವರ್ಷವೂ ಟೆಂಡರ್ ಪಡೆದ ಏಜೆನ್ಸಿಯವರು ಚಾಲಕ ಸಿಬ್ಬಂದಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ಆರು ತಿಂಗಳ ವೇತನ ಬಾಕಿಗೆ ಕೇವಲ 2-3 ತಿಂಗಳ ಸಂಬಳ ನೀಡುವ ಮೂಲಕ ಹಗಲು ರಾತ್ರಿ ಶ್ರಮಿಸುತ್ತಿರುವ ಸಿಬ್ಬಂದಿಯನ್ನು ಶೋಷಣೆ ಮಾಡಲಾಗುತ್ತಿದೆ. ಮುಷ್ಕರ, ಪ್ರತಿಭಟನೆ, ಬಹಿಷ್ಕಾರ ಮುಂತಾದ ಯಾವ ಅಸ್ತ್ರಗಳಿಗೂ ಮಣಿಯದ ಸರ್ಕಾರ ಆರಂಭದಲ್ಲಿ ಮಾಸಿಕ 30 ಸಾವಿರ ರೂ. ಇದ್ದ ಸಂಬಳವನ್ನು 24 ಸಾವಿರ ರೂ.ಗೆ ಇಳಿಸುವ ಬಗ್ಗೆ ಯೋಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವಲ್ಪ ಅನುದಾನ ಬಿಡುಗಡೆಯಾಗಿದ್ದರಿಂದ ಸದ್ಯ ಜನವರಿಯಿಂದ ಜೂನ್‌ವರೆಗೂ ಬಾಕಿಯಿರುವ 6 ತಿಂಗಳ ಪೈಕಿ ಕೇವಲ 3 ತಿಂಗಳ ಸಂಬಳವನ್ನು ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿ ಇನ್ನೂ ಮೂರು ತಿಂಗಳ ವೇತನವನ್ನು ಬಾಕಿಯುಳಿಸಿಕೊಂಡಿದೆ. ವಾಹನ ರಿಪೇರಿ ಹಾಗೂ ಸಂಬಳಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬುದು ಮೂಲಗಳ ಮಹಿತಿ. ತೆರಕಣಾಂಬಿ ಹಾಗೂ ಕಬ್ಬಹಳ್ಳಿಯ 108 ವಾಹನಗಳು ರಿಪೇರಿಗೆ ಹೋಗಿದ್ದು, ಹಣ ಬಿಡುಗಡೆಯಾಗದ ಪರಿಣಾಮ ಗ್ಯಾರೇಜಿನಲ್ಲಿಯೇ ನಿಂತಿವೆ. ಇದು ಸರ್ಕಾರದ ಕಾರ್ಯ ವೈಖರಿಯನ್ನು ಎತ್ತಿ ಹಿಡಿಯುವಂತಿದೆ.
ತಾಲೂಕಿನಲ್ಲಿ 4 ಆಸ್ಪತ್ರೆಗಳಲ್ಲಿ 108 ವಾಹನಗಳಿದ್ದರೂ ಕೆಲವು ರಿಪೇರಿಗೆ ಹೋಗಿದ್ದರಿಂದ ಕೊರತೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಹೆದ್ದಾರಿ ನಗು-ಮಗು ಯೋಜನೆಯ ಎರಡು ಹಾಗೂ ಹೆದ್ದಾರಿಯಲ್ಲಿ ಬಳಸುವ 1044 ಸಂಖ್ಯೆಯ ವಾಹನವನ್ನೂ ಬಳಕೆ ಮಾಡಲಾಗುತ್ತಿದೆ.
ಡಾ.ಅಲೀಂ ಪಾಷ ತಾಲೂಕು ಆರೋಗ್ಯಾಧಿಕಾರಿ, ಗುಂಡ್ಲುಪೇಟೆ