108 ವಾಹನಕ್ಕೆ ಬೇಕಿದೆ ತುರ್ತು ಚಿಕಿತ್ಸೆ

gan (10)
Published on

ರಾಘವೇಂದ್ರ ಪೈ ಗಂಗೊಳ್ಳಿ ಗಂಗೊಳ್ಳಿಯಿಂದ ಕಾರ್ಯಾಚರಿಸುತ್ತಿರುವ 108 ಆಂಬುಲೆನ್ಸ್ ವಾಹನ ಕೆಟ್ಟು ಹೋಗಿ ಕಳೆದ ಒಂದು ತಿಂಗಳಿನಿಂದ ಸೇವೆ ನೀಡದೆ ನಿಂತಲ್ಲೇ ನಿಂತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳು ಪರದಾಡುವಂತಾಗಿದೆ. ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಕಳೆದ ಹನ್ನೆರಡು ವರ್ಷಗಳ ಹಿಂದೆ ಸಾರ್ವಜನಿಕರ ಅನುಕೂಲಕ್ಕಾಗಿ ಗಂಗೊಳ್ಳಿಯಿಂದ 108 ಆಂಬುಲೆನ್ಸ್ ಸೇವೆ ಪ್ರಾರಂಭಿಸಲಾಗಿತ್ತು. ಗಂಗೊಳ್ಳಿ ಕೇಂದ್ರದ ಮೂಲಕ ಕಾರ್ಯನಿರ್ವಹಿಸುತ್ತಿದ್ದ 108 ಆಂಬುಲೆನ್ಸ್ ಸಂಪೂರ್ಣವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ ಈ ವಾಹನದ ಬದಲಿಗೆ ನಾಲ್ಕೈದು ವರ್ಷಗಳ ಹಿಂದೆ ಹೊಸ ಆಂಬುಲೆನ್ಸ್ ವಾಹನ ಒದಗಿಸಲಾಗಿತ್ತು. ಇದೀಗ ಒಂದು ತಿಂಗಳಿನಿಂದ ಈ ವಾಹನವೂ ಕೆಟ್ಟು ನಿಂತಿದ್ದು, ತುರ್ತು ಸಂದರ್ಭದಲ್ಲಿ ಜನರ ಸೇವೆಗೆ ದೊರೆಯದಂತಾಗಿದೆ. ದುರಸ್ತಿಗೆ ಆಗ್ರಹ: ಗಂಗೊಳ್ಳಿ ಕೇಂದ್ರದಿಂದ ಕಾರ್ಯನಿರ್ವಹಿಸುತ್ತಿರುವ ಈ ಆಂಬುಲೆನ್ಸ್‌ಗೆ ಪ್ರತಿ ತಿಂಗಳು 150 ಕೇಸ್‌ಗಳು ದೊರೆಯುತ್ತಿದ್ದು, ಉಡುಪಿ, ಮಂಗಳೂರು ಮೊದಲಾದ ಕಡೆಗಳಿಗೆ ರೋಗಿಗಳನ್ನು ಕರೆದೊಯ್ಯಲಾಗುತ್ತಿತ್ತು. ಗಂಗೊಳ್ಳಿ ಬಿಟ್ಟರೆ ಆಲೂರು ಮತ್ತು ಕಿರಿಮಂಜೇಶ್ವರ ಪ್ರದೇಶದಲ್ಲಿ 108 ಆಂಬುಲೆನ್ಸ್ ಇದ್ದರೂ ತಾಲೂಕು ಕೇಂದ್ರಕ್ಕೆ ಅತೀ ಸಮೀಪ ಇರುವ ಗಂಗೊಳ್ಳಿ ಆಂಬುಲೆನ್ಸ್‌ಗೆ ಹೆಚ್ಚಿನ ಕರೆಗಳು ಬರುತ್ತವೆ. ಈಗ ಈ ಆಂಬುಲೆನ್ಸ್ ಮೂಲೆ ಸೇರಿದೆ. ವಾಹವನ್ನು ರಿಪೇರಿ ಮಾಡಿ ಬಡ ರೋಗಿಗಳ ಸೇವೆಗೆ ನೀಡದ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹನ ಅವಲಂಬಿಸುವ ಸ್ಥಿತಿ

ಸರ್ಕಾರದ ಉಚಿತ ಸೇವೆಯಾದ 108 ಆಂಬುಲೆನ್ಸ್ ಸೇವೆ ಬಗ್ಗೆ ಜನರಲ್ಲಿ ಸಮಾಧಾನ ಇಲ್ಲದಿದ್ದರೂ ಬಡ ರೋಗಿಗಳು ಇದನ್ನೇ ನೆಚ್ಚಿಕೊಂಡಿದ್ದರು. ಇದೀಗ ಈ ಭಾಗದ ಆಂಬುಲೆನ್ಸ್ ಹಾಳಾಗಿ ನಿಂತಿರುವುದರಿಂದ ಜನರು ಖಾಸಗಿ ಆಂಬುಲೆನ್ಸ್ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಗೊಳ್ಳಿಗೆ ಸಮೀಪದಲ್ಲಿರುವ ಕಿರಿಮಂಜೇಶ್ವರ ಅಥವಾ ಆಲೂರಿನಿಂದ ಆಂಬುಲೆನ್ಸ್ ಬರಲು ಅರ್ಧ ಗಂಟೆ ಬೇಕಾಗಿರುವುದರಿಂದ ಜನರು ತುರ್ತು ಸಂದರ್ಭಗಳಲ್ಲಿ ಖಾಸಗಿ ಆಂಬುಲೆನ್ಸ್‌ನಲ್ಲೇ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ವಾಹನವನ್ನು ರಿಪೇಟಿ ಮಾಡದೆ ಸೇವೆ ಸ್ಥಗಿತಗೊಳಿಸಿದರೆ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.

ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶವಾಗಿರುವುದರಿಂದ ಸದಾ ಒಂದಲ್ಲ ಒಂದು ಅವಘಡ, ಅಪಘಾತಗಳು ನಡೆಯುತ್ತಿರುತ್ತದೆ. ಹೀಗಾಗಿ ಕಳೆದ 12 ವರ್ಷಗಳ ಹಿಂದೆ ಸರ್ಕಾರ 108 ಸೇವೆಯನ್ನು ಒದಗಿಸಿತ್ತು. ಗಂಗೊಳ್ಳಿಗೆ ನೀಡಲಾದ ಆಂಬುಲೆನ್ಸ್ ಕೆಟ್ಟು ಹೋಗಿ ತಿಂಗಳಾದರೂ ದುರಸ್ತಿ ಮಾಡಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆಂಬುಲೆನ್ಸ್ ರಿಪೇರಿಗೆ ಕ್ರಮಕೈಗೊಳ್ಳಬೇಕು. ಶಂಕರ ಜಿ., ಮೇಲ್‌ಗಂಗೊಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net