

ಪಿರಿಯಾಪಟ್ಟಣ: ಆಧ್ಯಾತ್ಮಿಕತೆಯಲ್ಲಿ ಸೂರ್ಯ ನಮಸ್ಕಾರಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ವಕೀಲ ಹರೀಶ್ ತಿಳಿಸಿದರು.
ರಥಸಪ್ತಮಿ ಅಂಗವಾಗಿ ಪಟ್ಟಣದ ಶ್ರೀ ಮಹದೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಅಂಜನಾದ್ರಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಆಸನಗಳನ್ನು ಸೇರಿಸಿ ಮಾಡಲಾಗುವ ಸೂರ್ಯ ನಮಸ್ಕಾರವನ್ನು ಪ್ರತಿನಿತ್ಯ ಮಾಡುವುದರಿಂದ ರೋಗ ರುಜಿನಗಳಿಂದ ದೂರ ಉಳಿಯಬಹುದು. ಸೂರ್ಯನು ನಮ್ಮ ಕಣ್ಣಿಗೆ ಕಾಣುವ ಪ್ರಕೃತಿಯ ಏಕ ಮಾತ್ರ ದೇವರು. ರಥಸಪ್ತಮಿಯ ದಿನದಂದು ವಿಶೇಷವಾಗಿ ಯೋಗ ಸಮಿತಿ ವತಿಯಿಂದ 108 ಸೂರ್ಯ ನಮಸ್ಕಾರಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಯೋಗ ಸಾಧಕ ಕೆಂಪಣ್ಣ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಯೋಗ ಎಲ್ಲೆಡೆ ಪ್ರಚಲಿಸುತ್ತಿದ್ದು, ಇದಕ್ಕೆ ಅದರಲ್ಲಿರುವ ಚಿಕಿತ್ಸಾ ಗುಣವೇ ಕಾರಣವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ರೋಗಮುಕ್ತ ಬದುಕನ್ನು ಕಾಣಬಹುದು ಎಂದು ತಿಳಿಸಿದರು.
ಪುರಸಭಾ ಸದಸ್ಯರಾದ ಎಚ್.ಕೆ.ಮಂಜುನಾಥ್, ಎಂ.ಸುರೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪಿ.ಎನ್.ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕಿ ಮಂಜುಳಾ, ಯೋಗ ಸಾಧಕರಾದ ಜೆಸಿಬಿ ಕೆಂಪಣ್ಣ, ದಾಸ್, ಆಶಾ ಮಹದೇವರಾವ್, ಕೌಶಿಕ್ ಕೃಷ್ಣ, ಬಿರ್ಲಾ ಹರೀಶ್, ಮುತ್ತೀಬ್, ಕತೀಬ್, ಬಿಂದು, ತುಳಸಿ ಇದ್ದರು.