೧೦೮ ವಾಹನ ಚಾಲಕರಿಗೆ ನಾಲ್ಕು ತಿಂಗಳಿನಿಂದ ವೇತನವಿಲ್ಲ

pressmeet (1)
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಮಾತನಾಡಿದರು.
Published on

ಚಿಕ್ಕಮಗಳೂರು: ನಾಲ್ಕು ತಿಂಗಳಿನಿಂದ ಸುವರ್ಣ ಕರ್ನಾಟಕ ಆರೋಗ್ಯ ಕವಚ ೧೦೮ ವಾಹನ ಚಾಲಕರಿಗೆ ವೇತನ ನೀಡಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ರಾಜ್ಯದ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇನ್ನು ೧೦ ದಿನಗಳೊಳಗೆ ವೇತನ ಬಿಡುಗಡೆ ಮಾಡದೆ ಹೋದರೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
೨೦೧೬ ರಿಂದ ೧೦೮ ಅಂಬುಲೆನ್ಸ್ ವಾಹನಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಅಪಘಾತ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಿ ನೆರವಾಗಿದ್ದೇವೆ. ಆದರೆ ಇಂದು ನಮ್ಮ ಭವಿಷ್ಯ ಕಷ್ಟದಲ್ಲಿದೆ. ನಮಗೆ ಹಿಂದಿನ ವರ್ಷ ತಿಂಗಳಿಗೆ ೩೭ ಸಾವಿರ ರುಪಾಯಿ ಸಂಬಳ ನೀಡುತ್ತಿದ್ದರು. ಕಳೆದ ವರ್ಷ ೩೧ ಸಾವಿರಕ್ಕೆ ಇಳಿಸಿದ್ದಾರೆ. ಈಗ ಮತ್ತೆ ಕಡಿತಗೊಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (೧೦೮) ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್, ಜಂಟಿ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾಧ್ಯಕ್ಷ ಪಿ.ಬಿ. ಸತೀಶ್, ಗಿರೀಶ್, ಅನಂತ ಪೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net