108 ಮಕ್ಕಳ ದತ್ತು ನೀಡಿದ ಕೇಂದ್ರ

102
Published on

ಬೆಳಗಾವಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೂರಾರು ಮಕ್ಕಳನ್ನು ರಕ್ಷಣೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. 2008ರಿಂದ 2020-21ರವೆಗೆ 126 ಮಕ್ಕಳನ್ನು ರಕ್ಷಣೆ ಮಾಡಿದೆ. ನಗರದ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಮೂಲಕ ಮಕ್ಕಳ ರಕ್ಷಣಾ ಘಟಕ ಮಕ್ಕಳ ಲಾಲನೆ, ಪಾಲನೆಯಲ್ಲಿ ತೊಡಗಿದೆ.

ಹಲವಾರು ಕಾರಣದಿಂದ ಹೆತ್ತವರಿಂದ ತಿರಸ್ಕಾರಕ್ಕೊಳಗಾದ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ತೋರಿಸುತ್ತಿದೆ. ಮಕ್ಕಳ ರಕ್ಷಣಾ ಘಟಕ 2019-20ರಲ್ಲಿ ಜಿಲ್ಲೆಯಲ್ಲಿ 16 ಮಕ್ಕಳನ್ನು ರಕ್ಷಣೆ ಮಾಡಿ ದತ್ತು ಕೇಂದ್ರಕ್ಕೆ ನೀಡಿದೆ.

ನೂರಾರು ಹಸಗೂಸುಗಳನ್ನು ರಕ್ಷಿಸಿ ಜನರ ಪ್ರೀತಿಗೆ ಪಾತ್ರವಾಗಿದೆ. ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪರಿಣಾಮಕಾರಿಯಾಗಿ ಮಾಡಿದೆ. ಮಕ್ಕಳ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಜಿಲ್ಲಾದ್ಯಂತ ದತ್ತು ಮಾಸಾಚರಣೆ ಅಂಗವಾಗಿ ಕಾನೂನಾತ್ಮಕ ದತ್ತು ಪ್ರಕ್ರಿಯೆ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅರಿವು ಮೂಡಿಸಲಾಗುತ್ತಿದೆ.

ಯಾರು ಅರ್ಹರು?: 25 ವರ್ಷ ಮೇಲ್ಪಟ್ಟ ಹಾಗೂ 55 ವರ್ಷದೊಳಗಿನ ದಂಪತಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಕೂಡಿರಬೇಕು. ಅರ್ಥಿಕವಾಗಿ ಸಬಲರಾಗಿರಬೇಕು. ವಿವಾಹವಾಗಿ 2 ವರ್ಷಗಳ ಕಾಲ ಜೀವನ ನಡೆಸಿರಬೇಕು. ಅವಿವಾಹಿತ, ವಿವಾಹ ವಿಚ್ಛೇದಿತ ಮಹಿಳೆಯರು ಗಂಡು ಮತ್ತು ಹೆಣ್ಣು ಮಗು ದತ್ತು ಪಡೆಯಬಹುದು. ಪುರುಷರು ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದಾಗಿದೆ. ಅನಾಥ ಮಕ್ಕಳಿಗೆ ರಕ್ಷಣೆ ಒದಗಿಸಿ, ಭವಿಷ್ಯ ರೂಪಿಸಲು ದತ್ತು ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.

ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರನ್ವಯ ಮಕ್ಕಳನ್ನು ಕಾನೂನು ಬಾಹೀರ ದತ್ತು ಪಡೆಯುವುದು ಅಪರಾಧವಾಗಿದೆ. ಅನಧಿಕೃತವಾಗಿ ಬೇರೆಯವರ ಮಕ್ಕಳನ್ನು ತಂದು ಸಾಕುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ ತಿಳಿಸಿದ್ದಾರೆ.

ತಕ್ಷಣ ವೈದ್ಯಕೀಯ ಚಿಕಿತ್ಸೆ ಲಭ್ಯ: ಯಾವುದೇ ಅನಾಥ ಮಗು ಪತ್ತೆಯಾದ ತಕ್ಷಣ ಆ ಮಗುವಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಸಂಬಂಧಪಟ್ಟ ವಲಯದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ಬಳಿಕ ಮಗುವಿನ ಬಗ್ಗೆ ಜಾಹೀರಾತು, ಪ್ರಕಟಣೆ ನೀಡಿ 60 ದಿನದೊಳಗೆ ಮಗುವಿನ ಜೈವಿಕ ಪೋಷಕರು ಬಾರದಿದ್ದರೆ, ಆ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶ ಅನುಸಾರ ದತ್ತು ಮುಕ್ತ ಎಂದು ಘೋಷಣೆ ಮಾಡಲಾಗುತ್ತದೆ. ಮಗುವಿನ ದತ್ತು ಪ್ರಕ್ರಿಯೆ ಮುಗಿಯಲು 6 ತಿಂಗಳು ಕಾಲಾವಕಾಶ ಹಿಡಿಯುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿದೇಶಕ್ಕೂ ಮಕ್ಕಳ ದತ್ತು: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅನುದಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದಿಂದ ಇದುವರೆಗೆ ದೇಶದ ವಿವಿಧೆಡೆ 108 ಮಕ್ಕಳನ್ನು ದತ್ತು ನೀಡಲಾಗಿದೆ. ಈ ಪೈಕಿ 4 ಮಕ್ಕಳನ್ನು ಅಮೆರಿಕ ಹಾಗೂ ಆಸ್ಟ್ರೇಲಿಯಾಗೆ ದತ್ತು ನೀಡಲಾಗಿದೆ. ಪ್ರಸ್ತುತ ದತ್ತು ಕೇಂದ್ರದಲ್ಲಿ 18 ಮಕ್ಕಳಿದ್ದಾರೆ. ಇದರಲ್ಲಿ 11 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. 7 ಮಕ್ಕಳು ಕೇಂದ್ರದಲ್ಲಿ ಆರೈಕೆಯಾಗುತ್ತಿವೆ.

ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪರಿಣಾಮಕಾರಿಯಾಗಿ ಮಾಡಿದ್ದೇವೆ. ಜನರಲ್ಲಿ ಮಕ್ಕಳ ರಕ್ಷಣೆ ಹಾಗೂ ದತ್ತು ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. |ರವೀಂದ್ರ ರತ್ನಾಕರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬೆಳಗಾವಿ

| ಜಗದೀಶ ಹೊಂಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net