

ಧಾರವಾಡ: ನಗರದ ಇತಿಹಾಸ ಪ್ರಸಿದ್ಧ ರವಿವಾರಪೇಟೆಯ ಶ್ರೀ ಲಕ್ಷ್ಮೀನಾರಾಯಣ ಜಾತ್ರಾ ಮಹೋತ್ಸವ ಈ ಬಾರಿ ಸರಳ ರೀತಿಯಲ್ಲಿ ಆಚರಣೆಯಾಗಲಿದೆ. 107 ವರ್ಷಗಳ ಸಂಪ್ರದಾಯಕ್ಕೆ ಕರೊನಾ ಕರಿಛಾಯೆ ಆವರಿಸಿದೆ.
ದಸರಾ ಸಂದರ್ಭದಲ್ಲಿ 9 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತವಾಗಲಿದೆ. ದಸರಾ ದಿನಗಳಲ್ಲಿ ನವ ವಧುವಿನಂತೆ ಶೃಂಗರಿಸಿಕೊಂಡಿರುತ್ತಿದ್ದ ದೇವಸ್ಥಾನದಲ್ಲಿ ಈ ವರ್ಷ ಆ ಅಬ್ಬರವಿಲ್ಲ. 9 ದಿನಗಳ ಕಾಲ ವಿಷ್ಣುವಿನ 9 ಅವತಾರಗಳಿಗೆ ಜೀವ ತುಂಬುವ ಕಾರ್ಯ ನಡೆಯಲಿದ್ದು, ಭಕ್ತಾದಿಗಳಿಗೆ ಹೊರಗಿನಿಂದ ಮಾತ್ರ ದರ್ಶನವಕಾಶ ಕಲ್ಪಿಸಲಾಗಿದೆ.
ಬೇರೆ ಊರುಗಳಲ್ಲಿ ನಡೆಯುವ ಜಾತ್ರೆಗೂ ಧಾರವಾಡದ ಶ್ರೀ ಲಕ್ಷ್ಮೀನಾರಾಯಣ ಜಾತ್ರೆಗೂ ವ್ಯತ್ಯಾಸವಿದೆ. ಇಲ್ಲಿ ಬೆಳೆದು ದೊಡ್ಡವರಾಗಿ ದೇಶ- ವಿದೇಶಕ್ಕೆ ಹೋದವರು ದಸರೆಯನ್ನು ನೆನೆಯದೆ ಇರಲು ಸಾಧ್ಯವಿಲ್ಲ. ಬೇರೆಡೆ ತೆರಳಿದ್ದ ಧಾರವಾಡಿಗರು ಜಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದರು. ಆದರೆ ಕರೊನಾ ನಿಯಂತ್ರಣ ಅನಿವಾರ್ಯವಾಗಿದ್ದರಿಂದ ಬೇಸರ ತರಿಸಿದೆ.
ಹೆಣ್ಣುಮಕ್ಕಳ ಅಚ್ಚುಮೆಚ್ಚು: ಈ ಜಾತ್ರೆ ಕೇವಲ 9 ದಿನಗಳಿಗೆ ಸೀಮತವಲ್ಲ. ಬದಲಿಗೆ ಇದು ತಿಂಗಳ ಜಾತ್ರೆ. ಜಾತ್ರೆಗೆ ಬಂದ ಮಾರಾಟಗಾರರು ಬರೋಬ್ಬರಿ ತಿಂಗಳ ಕಾಲ ಠಿಕಾಣಿ ಹೂಡುವುದು ವಾಡಿಕೆಯಾಗಿತ್ತು. ಜಾತ್ರೆಗೆ ಲಗ್ಗೆ ಇಡುತ್ತಿದ್ದ ಮಹಿಳೆಯರು ಅಗತ್ಯ ಪಾತ್ರೆ, ಅಲಂಕಾರಿಕ ವಸ್ತುಗಳು, ಬಟ್ಟೆ, ಬ್ಯಾಗ್, ಇತರ ಸಾಮಗ್ರಿಗಳನ್ನು ಇಲ್ಲಿಂದ ಖರೀದಿಸುತ್ತಿದ್ದರು. ಆದರೆ ಈ ಬಾರಿ ಖರೀದಿಯ ಅವಕಾಶವಿಲ್ಲ.
ಪ್ರತಿವರ್ಷ ಶ್ರೀ ಲಕ್ಷ್ಮೀ ನಾರಾಯಣ ಜಾತ್ರೆಯಲ್ಲಿ ಪಾಲ್ಗೊಳ್ಳುವುದೇ ಸಡಗರವಾಗಿತ್ತು. ಆದರೆ ಈ ಬಾರಿ ಕರೊನಾ ಕಾಟದಿಂದಾಗಿ ಅದಕ್ಕೆ ಅವಕಾಶವಿಲ್ಲ. ಮುಂದಿನ ವರ್ಷ ಕರೊನಾ ತೊಲಗಿ ಜಾತ್ರೆ ಮತ್ತೆ ಕಳೆಗಟ್ಟುವಂತಾಗಲಿ.| ಅಕ್ಕಮಹಾದೇವಿ ಯರಗಂಬಳಿಮಠ, ಸಾರಸ್ವತಪುರ ನಿವಾಸಿ
ಈ ವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ಇಲ್ಲ. ಕೇವಲ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಕರೊನಾ ನಿಯಂತ್ರಣ ಅನಿವಾರ್ಯತೆ ಇರುವುದರಿಂದ ಸರ್ಕಾರದ ಆದೇಶ ಪಾಲಿಸಲಾಗುತ್ತಿದೆ.| ಅಮರ ಟಿಕಾರೆ, ದೇವಸ್ಥಾನ ಕಮಿಟಿ ಮುಖ್ಯಸ್ಥ