

ಹಾನಗಲ್ಲ: ಅಧ್ಯಾತ್ಮ ಸಾಧಕರಿಗೆ ಸಿದ್ಧಿಗೆ ಪ್ರಾಪ್ತಿಗೆ ಶಕ್ತಿ ತುಂಬುವ 104ನೇ ಅಂಖಂಡ ವೀಣಾ ಸಪ್ತಾಹ ಪಟ್ಟಣದ ಶಂಕರ ಮಠದ ಆವರಣದ ಶಂಕರ ಮಂಗಲ ಭವನದಲ್ಲಿ ಜ. 19ರಿಂದ 26ರವರೆಗೆ ಅವಧೂತರು, ಸಾಧಕರು, ಯತಿಗಳ ಸಮ್ಮುಖದಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಅಗಡಿ ಆನಂದವನದ ಬ್ರಹ್ಮಶ್ರೀ ವಿಶ್ವನಾಥ ಚಕ್ರವರ್ತಿಗಳು ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಇತಿಹಾಸದ ಮೊದಲನೇ ಅಖಂಡ ವೀಣಾ ಸಪ್ತಾಹ ಅಗಡಿ ಆನಂದವನದಲ್ಲಿಯೇ ನಡೆದಿತ್ತು. ಈವರೆಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 103 ಸಪ್ತಾಹಗಳು ನಡೆದಿವೆ. ಇದು 104ನೇ ಸಪ್ತಾಹವಾಗಿ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿದೆ ಎಂದರು.
ಜ. 18ರಂದು ರ್ಕಹಳ್ಳಿಯ ಸಂತ ಶ್ರೇಷ್ಠ ಸುರೇಶ ಮಹಾರಾಜರು ಅವರ ಪುರಪ್ರವೇಶ ನಡೆಯಲಿದೆ. ಪಟ್ಟಣದ ತಾರಕೇಶ್ವರ ದೇವಸ್ಥಾನದಿಂದ ಶಂಕರ ಮಂಗಲ ಭವನದವರಗೆ ಶೋಭಾ ಯಾತ್ರೆ ನಡೆಯುವುದು. 19ರಿಂದ ನಿರಂತರ 8 ದಿನಗಳ ಕಾಲ ವಿರಾಮವಿಲ್ಲದೆ ಅಖಂಡ ವೀಣಾ ಸಪ್ತಾಹ ಜರುಗಲಿದೆ. ಪ್ರತಿ ನಿತ್ಯ ಬೆಳಗ್ಗೆ 5 ರಿಂದ ರಾತ್ರಿ 8.30 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳು ನಡೆಯುವವು. ವಿವಿಧ ಪೂಜೆ, ಸಾಮೂಹಿಕ ನಾಮಸ್ಮರಣೆ, ಸಾಮೂಹಿಕ ಬಿಲ್ವಾರ್ಚನೆ, ಭಂಡಾರ ಅರ್ಚನೆ, ತುಳಸಿ ಅರ್ಚನೆ, ಕುಂಕುಮಾರ್ಚನೆ, ಸಾಮೂಹಿಕ ಭಜನೆ, ಸಾಂಪ್ರಾದಾಯಿಕ ಭಜನೆ, ಕೀರ್ತನೆಗಳು ನಡೆಯಲಿವೆ. 25ರಂದು ಸಂಜೆ 6 ಗಂಟೆಗೆ ಪಟ್ಟಣದ ಗಣಪತಿ ದೇವಸ್ಥಾನದಿಂದ ಶಂಕರ ಮಠದವರೆಗೆ ಶೋಭಾಯಾತ್ರೆ ನಡೆಯಲಿದೆ. 7 ಗಂಟೆಗೆ ಶ್ರೀ ಚಿದಂಬರರ ಲೀಲೆಗಳ ಕುರಿತಾದ ರೂಪಕ ಪ್ರದರ್ಶನಗೊಳ್ಳಲಿದೆ. ಈ ಸಪ್ತಾಹದಲ್ಲಿ ಚಿದಂಬರ ಸ್ವಾಮಿಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ನರಗುಂದದ ಶ್ರೀದೇವಿ ಕುಲಕರ್ಣಿ, ಮುಂಬೈನ ಶ್ರೀಗುರು ಚಿದಂಬರ ದಿಕ್ಷೀತರು, ಕುರ್ತಕೋಟಿಯ ದಿಗಂಬರ ಶಾಸ್ತ್ರಿಗಳು, ಬಾಗಲಕೋಟೆಯ ಸಂತ ಅರುಣ ದೇಸಾಯಿ, ಅಗಡಿ ಆನಂದವನದ ಬ್ರಹ್ಮಶ್ರೀ ವಿಶ್ವನಾಥ ಚಕ್ರವರ್ತಿಗಳು, ಗುರುದತ್ತಮೂರ್ತಿ ಚಕ್ರವರ್ತಿಗಳು, ಶ್ರೀಕ್ಷೇತ್ರ ಹೆಬ್ಬಳ್ಳಿಯ ದತ್ತಾವಧೂತರು, ಗುರ್ಲಹೊಸೂರಿನ ಗಂಗಾಧರ ದಿಕ್ಷೀತರು, ಶಿರಣಗಿಯ ಬ್ರಹ್ಮಾನಂದರು, ಸಂತ ಸುರೇಶ ಮಹಾರಾಜರು, ಹಾನಗಲ್ಲಿನ ಲಲಿತಾ ದೇಸಾಯಿ, ಸುರೇಖಾ ಕುಲಕರ್ಣಿ ಅವರು ವಿವಿಧ ಆಧ್ಯಾತ್ಮಿಕ, ಭಕ್ತಿಶ್ರೇಷ್ಠತೆಯ ವಿಷಯಗಳ ಉಪನ್ಯಾಸ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಂಡ ವೀಣಾ ಸಪ್ತಾಹ ಸಮಿತಿ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ಗೌರವಾಧ್ಯಕ್ಷರಾದ ಘನಶ್ಯಾಮ ದೇಶಪಾಂಡೆ, ಶಂಕರಭಟ್ ಜೋಶಿ, ಕಾರ್ಯದರ್ಶಿಗಳಾದ ರಾಜಾರಾಮ ಕುಲಕರ್ಣಿ, ಕೃಷ್ಣಾ ಪೂಜಾರ, ಪ್ರಮೋದ ಕುಲಕರ್ಣಿ, ಸಂಚಾಲಕರಾದ ಉದಯ ನಾಸಿಕ, ಗಿರೀಶ ದೇಶಪಾಂಡೆ ಇದ್ದರು.