10,457 ಪ್ರಕರಣಗಳು ಇತ್ಯರ್ಥ

cases settled
ಶನಿವಾರ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬೇರ್ಪಟ್ಟಿದ್ದ ನಾಲ್ಕು ಜೋಡಿಗಳಿಗೆ ಮತ್ತೆ ಮರು ಮದುವೆ ಮಾಡಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಾನಾಯಕ , ಸುಭಾಸ ಸಂಕದ, ಸತೀಶ, ಹಿರಿಯ ನ್ಯಾಯವಾದಿ, ಸಂಧಾನಕಾರ ಎಂ. ಜಿ ಭೃಂಗಿಮಠ ಇದ್ದರು.
Published on

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 10,457 ಪ್ರಕರಣಗಳು ಇತ್ಯರ್ಥಗೊಂಡು ಸಾಧನೆಯನ್ನೇ ಮಾಡಿದೆ. ಪತಿ-ಪತ್ನಿ ನಡುವಿನ ವೈಮನಸ್ಸಿನಿಂದ ವಿಚ್ಛೇದನ, ಜೀವನಾಂಶ ಕೋರಿ ದಾಖಲಾಗಿದ್ದ ನಾಲ್ಕು ಜೋಡಿಗಳ ಪ್ರಕರಣವನ್ನು ಲೋಕ ಅದಾಲತ್ ಸಂಧಾನದ ಮೂಲಕ ಮತ್ತೊಮ್ಮೆ ಒಂದಾಗುವಂತೆ ಮಾಡಿದ್ದು ವಿಶೇಷವಾಗಿತ್ತು.

ವಿಜಯಪುರ ನಗರದ ಕೋರ್ಟ್ ಆವರಣದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ಇವರ ಸಹಯೋಗದಲ್ಲಿ ಶನಿವಾರ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಆಸ್ತಿ ವಿಭಾಗ ಕೋರಿದ 128 ದಾವೆಗಳು, 158 ಚೆಕ್‌ಬೌನ್ಸ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಕೋರಿದ 136 ಪ್ರಕರಣಗಳು, 43 ರಾಜಿ ಆಗಬಹುದಾದ ಕ್ರಿಮಿನಲ್ ದಾವೆಗಳು ಸೇರಿದಂತೆ ವಿಚಾರಣೆಗೆ ಬಾಕಿ ಇದ್ದ ಒಟ್ಟು 10457 ಪ್ರಕರಣಗಳು ಇತ್ಯರ್ಥಗೊಂಡು ರಾಷ್ಟ್ರೀಯ ಅದಾಲತ್ ಯಶಸ್ವಿಯಾಗಿದೆ. 1,32,522 ವ್ಯಾಜ್ಯ ಪೂರ್ವ ಪ್ರಕರಣಗಳೂ ಜನತಾ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿವೆ.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ಇವರ ಸಹಯೋಗದಲ್ಲಿ ನಡೆದ ಬೃಹತ್ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಅವರು ಬೃಹತ್ ರಾಷ್ಟ್ರೀಯ ಲೋಕ ಅದಾಲತ್‌ಗೆ ಚಾಲನೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಸಮ್ಮುಖದಲ್ಲಿ ನಾಲ್ಕು ಜೋಡಿಗಳ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ಹೇಳಿ ಅವರ ಸಮ್ಮುಖದಲ್ಲಿಯೇ ಪರಸ್ಪರ ಮಾಲಾರ್ಪಣೆ ಮಾಡಿಸಿದರು. ಇದಕ್ಕೆ ನ್ಯಾಯಾಧೀಶರು, ನ್ಯಾಯವಾದಿಗಳು ಸಾಕ್ಷಿಯಾದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಾನಾಯಕ , ಸುಭಾಸ ಸಂಕದ, ಸತೀಶ. ಎಲ್.ಪಿ, ಮಂಜುನಾಥ , ಮದ್ವೇಶ ಡಬೇರ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಸುಭಾಸ ಹೊಸಕಲ್ಲೆ, ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಶಿವಾನಂದ ಎಂ. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪದ್ಮಶ್ರೀ ಮನ್ನೋಳಿ, ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ, ಕೆ. ಉಮಾ, ಲೋಕೇಶ ಡಿ ಹವಳೆ, ಸಿವಿಲ್ ನ್ಯಾಯಧೀಶ ವಿಶ್ವನಾಥ ಯಮಕನಮರಡಿ, ಸ್ಮೀತಾ ಎಂ. ಎಂ , ಚಂದ್ರಕಾಂತ, ಸಂಧಾನಕಾರ ಎಂ.ಜಿ. ಭೃಂಗಿಮಠ, ಡಿ.ಬಿ. ಮಠದ, ಎಂ ಭೂಸಕೊಂಡ ಸೇರಿ ಹಲವು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net