104 ಫಲಾನುಭವಿಗಳಿಗೆ ಹಣ

28 ARD 01 (1)
Published on

ಔರಾದ್: ಅತಿವೃಷ್ಟಿಯಿಂದ ಕ್ಷೇತ್ರದಲ್ಲಿ ಸಾಕಷ್ಟು ಮನೆ ಹಾನಿಗೀಡಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ಸಂತ್ರಸ್ಥರಿಗೆ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. ತಾಲೂಕಿನಲ್ಲಿ ೧೦೪ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಉಳಿದವರಿಗೆ ಶೀಘ್ರ ಬಿಡುಗಡೆ ಆಗಲಿದೆ ಎಂದು ಶಾಸಕ ಪ್ರಭು ಚವ್ಹಾಣ್ ತಿಳಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಹಾನಿಗೀಡಾದ ಸಂತ್ರಸ್ಥರಿಗೆ ಸರ್ಕಾರದಿಂದ ಬಿಡುಗಡೆಯಾದ ಪರಿಹಾರದ ತಿಳುವಳಿಕೆ ಪತ್ರಗಳನ್ನು ಸೋಮವಾರ ವಿತರಿಸಿ ಮಾತನಾಡಿದರು.
ಅತಿವೃಷ್ಟಿ ವೇಳೆ ಕ್ಷೇತ್ರದಲ್ಲಿನ ವಾಸ್ತವ ವೀಕ್ಷಿಸಿದ್ದು, ಮನೆ ಹಾನಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ತಹಸೀಲ್ದಾರರು ಸೇರಿ ಎಲ್ಲ ಅಧಿಕಾರಿಗಳು ಕೆಲಸ ಮಾಡಿದ್ದು, ಶೀಘ್ರದಲ್ಲಿ ಎಲ್ಲ ಪರಿಹಾರ ಬಿಡುಗಡೆ ಆಗಲಿದೆ. ಪ್ರತಿ ಫಲಾನುಭವಿ ಖಾತೆಗೆ ೫೦ ಸಾವಿರ ರೂ. ಮಂಜೂರಾಗಿದೆ. ಸದುಪಯೋಗ ಪಡೆಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರದ ಜನರು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದು, ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದ್ದೇನೆ. ಕಷ್ಟ, ಸುಖದಲ್ಲಿ ಜತೆಗಿದ್ದೇನೆ. ಏನೇ ಸಮಸ್ಯೆ ಇದ್ದರೂ ನೇರವಾಗಿ ಸಂಪರ್ಕಿಸಬೇಕು ಎಂದರು.
ಮಳೆ ಕೊರತೆಯಿಂದ ಔರಾದ್ ಕ್ಷೇತ್ರದಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನೊಂದ ರೈತರಿಗೆ ಸರ್ಕಾರದ ಪರಿಹಾರಧನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಪಿಎಂಸಿ ಅಧ್ಯಕ್ಷ ದೋಂಡಿಬಾ ನರೋಟೆ, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಸಹಾಯಕ ನಿರ್ದೇಶಕ ಸುರೇಶ ಕೋಟೆ, ಗ್ರೇಡ್-೨ ತಹಸೀಲ್ದಾರ್ ನರಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net