

ತುಮಕೂರು : ಜಿಲ್ಲೆಯಲ್ಲಿ ಕರೊನಾ ಮತ್ತೆ ಅಟ್ಟಹಾಸ ಮೆರೆದಿದೆ. ಒಂದೇ ದಿನ 133 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 2411ಕ್ಕೇರಿದೆ. ಶುಕ್ರವಾರ ಮೂವರು ಸೋಂಕಿನಿಂದ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಮೃತರ ಸಂಖ್ಯೆ 70ಕ್ಕೆ ಮುಟ್ಟಿದೆ.
ತುಮಕೂರು ತಾಲೂಕಿನಲ್ಲಿ 44 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 981ಕ್ಕೇರಿದೆ. ಇನ್ನು ತಿಪಟೂರಿನಲ್ಲಿ 25 ಮಂದಿ, ಕುಣಿಗಲ್-13, ಕೊರಟಗೆರೆ-15, ಚಿಕ್ಕನಾಯಕನಹಳ್ಳಿ-4, ಶಿರಾ-5, ಮಧುಗಿರಿ-4, ಗುಬ್ಬಿ-7, ಪಾವಗಡ-5 ಹಾಗೂ ತುರುವೇಕೆರೆಯಲ್ಲಿ 11 ಮಂದಿಗೆ ಸೋಂಕು ತಗುಲಿದೆ.
104 ಮಂದಿ ಗುಣಮುಖ: ಜಿಲ್ಲೆಯಲ್ಲಿ ಒಂದೇ ದಿನ 104 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 1369 ಮಂದಿ ಸೋಂಕು ಮುಕ್ತರಾಗಿ, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 972 ಸಕ್ರಿಯ ಪ್ರಕರಣಗಳಿವೆ. 8 ಮಂದಿ ಐಸಿಯುನಲ್ಲಿದ್ದಾರೆ.
ಮೂವರು ಬಲಿ: ಶುಕ್ರವಾರ ಮೂವರನ್ನು ಕರೊನಾ ಬಲಿಪಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಬಿಜಿ ಪಾಳ್ಯದ 65 ವರ್ಷದ ವೃದ್ಧ ಜು.26ರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಆ.6ರಂದು ಮೃತಪಟ್ಟಿದ್ದಾರೆ. ಪಿಎಚ್ ಕಾಲನಿಯ 60 ವರ್ಷದ ವೃದ್ಧೆ ಆ.1ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, 5 ರಂದು ಮೃತಪಟ್ಟಿದ್ದಾರೆ. ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ತುಮಕೂರು ತಾಲೂಕಿನ ನಾಗವಲ್ಲಿಯ 78 ವರ್ಷದ ವೃದ್ಧ ಆ.3ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದು 6ರಂದು ಮೃತಪಟ್ಟಿದ್ದಾರೆ. ಎಲ್ಲರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯನ್ವಯ ಮಾಡಲಾಗಿದೆ.
ಸಿದ್ಧಗಂಗಾ ಶ್ರೀಗಳಿಗೆ ನೆಗೆಟಿವ್ : ಸಿದ್ಧಗಂಗಾಮಠದ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ಕಚೇರಿ ಭದ್ರತಾ ಸಿಬ್ಬಂದಿ ಪೊಲೀಸ್ ಗನ್ವ್ಯಾನ್ಗೂ ಸೋಂಕು ತಗುಲಿದೆ. ಮಠದ ಅಡುಗೆಮನೆ ಸ್ವಚ್ಛತಾ ಸಿಬ್ಬಂದಿ ಹಾಗೂ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಸಿದ್ದಲಿಂಗಶ್ರೀಗಳು ರ್ಯಾಪಿಡ್ ಆಂಟಿಜನ್ ಟೆಸ್ಟ್ಗೆ ಒಳಪಟ್ಟಿದ್ದು ಶ್ರೀಗಳಿಗೆ ನೆಗೆಟಿವ್ ಬಂದಿದೆ. ಕರೊನಾ ಹೆಚ್ಚಾದಂತೆ ಶ್ರೀಗಳು ಸಾಕಷ್ಟು ಸುರಕ್ಷತಾ, ಮುಂಜಾಗ್ರತಾ ಕ್ರಮವಹಿಸಿದ್ದರು.