

ಆಲಮಟ್ಟಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಸೇರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಳೆದ 15 ದಿನಗಳಿಂದ ಲಾಲ್ ಬಹಾದೂರ್ ಶಾಸ್ತ್ರೀ ಸಾಗರಕ್ಕೆ ವ್ಯಾಪಕ ನೀರು ಹರಿದು ಬಂದಿದ್ದರಿಂದ ಜಲಾಶಯ ಭಾಗಶಃ ಭರ್ತಿಯಾಗಿದೆ.
ಗರಿಷ್ಠ 519.60 ಮೀ. ಎತ್ತರದ ಜಲಾಶಯದಲ್ಲಿ ಸೋಮವಾರ ಸಂಜೆ 518.48ಮೀ. ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,36,986 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 42 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಬಲಭಾಗದ ವಿದ್ಯುತ್ ಘಟಕಗಳ ಮೂಲಕ ಹಾಗೂ ಗೇಟ್‌ಗಳ ಮೂಲಕ 17,250 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. 123 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 102.262 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾಶಯ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 42 ಸಾವಿರ ಕ್ಯೂಸೆಕ್ ನೀರು ಹರಿಸಿ ಎಲ್ಲ ಆರು ಘಟಕಗಳಿಂದ 275 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಗರಿಷ್ಠ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 290 ಮೆಗಾ ವಾಟ್ ಇದೆ.