ಜಿಲ್ಲೆಯಲ್ಲಿ 102 ಡೆಂಘೆ ಪ್ರಕರಣಗಳು, ನಿಯಂತ್ರಣಕ್ಕೆ ಸೂಚಿಸಿದ ಜಿಲ್ಲಾಧಿಕಾರಿ

4CBP3
Published on

ಚಿಕ್ಕಬಳ್ಳಾಪುರ: ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಲಿಂಗಾನುಪಾತದ ಪ್ರಮಾಣವನ್ನು ಸಮತೋಲನಕ್ಕೆ ತರಲು ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೆ.ಪಿ.ಎಂ.ಇ ಮತ್ತು ಪಿ.ಸಿ.ಪಿ.ಎನ್​.ಡಿ.ಟಿ ನೋಂದಣಿ ಹಾಗೂ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಲಿಂಗಾನುಪಾತದ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. 2022 ನೇ ಸಾಲಿನಲ್ಲಿ 1000 ಪುರುಷರಿಗೆ 870 ಮಹಿಳೆಯರಿದ್ದರು. 2023ನೇ ಸಾಲಿನಲ್ಲಿ 936 ಕ್ಕೆ ಹೆಚ್ಚಳವಾಗಿದೆ. ಈ ವರ್ಷ 999ಕ್ಕೆ ಲಿಂಗಾನುಪಾತ ಪ್ರಮಾಣವನ್ನು ತರುವ ಗುರಿಯನ್ನು ಹೊಂದಲಾಗಿದೆ ಎಂದರು. ಪ್ರತಿ ವರ್ಷ ಲಿಂಗಾನುಪಾತ ಪ್ರಮಾಣವನ್ನು ಸರಿದೂಗಿಸಿ 1000 ಪುರುಷರಿಗೆ 1000 ಮಹಿಳೆಯರು ಇರುವಂತೆ ಆರೋಗ್ಯಕರ ಸಮಾಜ ನಿರ್ಮಿಸುವುದು ಪ್ರಮುಖ ಜವಬ್ದಾರಿಯಾಗಿದೆ ಎಂದರು.

ಜಿಲ್ಲೆಗೆ ಹೊಂದಿಕೊಂಡಿರುವ ಅಂತಾಜ್ಯ ಗಡಿ ಪ್ರದೇಶಗಳಲ್ಲಿ (ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ಮತ್ತು ಚಿಂತಾಮಣಿ) ಸ್ಕಾನಿಂಗ್​ ಕೇಂದ್ರಗಳಿಗೆ ಹೊರ ರಾಜ್ಯಗಳಿಂದ ಬರುವಂತಹ ಹಾಗೂ ಹೊರ ರಾಜ್ಯಗಳಿಗೆ ಹೋಗುವಂತಹ ಮೊದಲನೇ ಹಾಗೂ ಎರಡನೇ ಹೆಣ್ಣು ಮಕ್ಕಳಿರುವ ಗರ್ಭಿಣಿಯರ ಮಾಹಿತಿ ಸಂಗ್ರಹಿಸಿ ನಿಗಾ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ನಕಲಿ ವೈದ್ಯರು ಮತ್ತು ನಕಲಿ ಕ್ಲನಿಕ್​ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು. ಜಿಲ್ಲೆಯಲ್ಲಿ 250 ಖಾಸಗೀ ಆರೋಗ್ಯ ಸಂಸ್ಥೆಗಳು ನೋಂದಣಿಯಾಗಿದ್ದು ಇವುಗಳು ಚಿಕಿತ್ಸಾ ವಿಭಾಗ, ದರದ ನಾಮಫಲಕವನ್ನು ಅಳವಡಿಸಬೇಕು ಎಂದರು.

*ಡೆಂಘೆ ಜ್ವರ ನಿಯಂತ್ರಣಕ್ಕೆ ಸೂಚನೆ

ಜಿಲ್ಲೆಯಲ್ಲಿ ಡೆಂಘೆ ಜ್ಚರ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ ಸ್ಥಳಿಯ ಆಡಳಿತ ಸಂಸ್ಥೆಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಾಗೃತಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 102 ಡೆಂಘೆ ಪ್ರಕರಣಗಳು (ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿವರೆಗೆ) ದಾಖಲಾಗಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗದಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಡೆಂಘೆ ಜ್ವರ ಪತ್ತೆ ಪರೀಗೆ 300 ರೂ ನಿಗದಿಪಡಿಸಿದ್ದು ಹೆಚ್ಚಿನ ದರವನ್ನು ವಸೂಲಿ ಮಾಡಿದರೆ ಕೆ.ಪಿ.ಎಂ.ಇ ಅನ್ವಯ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net