

ದೊಡ್ಡಬಳ್ಳಾಪುರ: ಉತ್ತಮ ಮಳೆ, ಬೆಳೆ, ಊರಿನ ಅಭಿವೃದ್ಧಿ, ರಕ್ಷಣೆಗಾಗಿ ಉದ್ಭವ ಬಸವಣ್ಣನಿಗೆ 101 ತೆಂಗಿನಕಾಯಿ ಒಡೆಯುವ ಮೂಲಕ ಕೊಟ್ಟಿಗೆಮಾಚೇನಹಳ್ಳಿ ಗ್ರಾಮಸ್ಥರು ಹರಕೆ ತೀರಿಸಿದ್ದಾರೆ.
ಗ್ರಾಮದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಸಾಸಲು ಚಿನ್ನಮ್ಮನ ಪಾದಾಲು ಬಂಡೆ ಬಳಿ ಉದ್ಭವ ಬಸವಣ್ಣ ಮೂರ್ತಿ ಇದ್ದು, ಅಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಊರಿಗೆ ಊರೇ ಹೋಗಿ ಉದ್ಭವ ಬಸವಣ್ಣ ಮೂರ್ತಿಗೆ 101 ತೆಂಗಿನಕಾಯಿ ಹೊಡೆಯುವ ಮೂಲಕ ಉತ್ತಮ ಮಳೆ, ಬೆಳೆ, ಊರಿನ ಅಭಿವೃದ್ಧಿ, ರಕ್ಷಣೆ ಮಾಡುವಂತೆ ದೇವರ ಮೊರೆ ಹೋಗಿದ್ದಾರೆ. ಊರಿನ ಪ್ರತಿ ಮನೆ ಮನೆಗೆ ಹೋಗಿ ಅಕ್ಕಿ ಬೇಳೆ ಸೇರಿದಂತೆ ಪ್ರಸಾದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಕಲೆ ಹಾಕಲಾಗಿತ್ತು. ಪೂಜೆ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ತಲೆ ತಲಾಂತರ ಬಂದಂತಹ ಆಚಾರ ವಿಚಾರವಿದು. ಸುಮಾರು ವರ್ಷಗಳಿಂದ ನಮ್ಮ ಊರಿನ ಗ್ರಾಮಸ್ಥರೊಬ್ಬರು ಕುರಿ, ಮೇಕೆ, ಹಸು ಮೇಯಿಸಲು ಸಾಸಲು ಚಿನ್ನಮ್ಮನ ಪಾದಾಲು ಬಂಡೆ ಬಳಿ ಹೋದಾಗ ಉದ್ಭವ ಬಸವಣ್ಣಮೂರ್ತಿ ಕಂಡುಬಂದಿದೆ. ಅಂದಿನ ರಾತ್ರಿಯೇ ಆತನಿಗೆ ದೇವರು ಕನಸಿಗೆ ಬಂದು ಪ್ರತಿ ವರ್ಷ 101 ತೆಂಗಿನಕಾಯಿ ಹೊಡೆದು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಿದರೆ ಇ?್ಟಾರ್ಥಸಿದ್ದಗಳು ನೆರವೇರುತ್ತವೆ ಎಂದು ಹೇಳಲಾಗಿತ್ತು. ಆದ್ದರಿಂದ ಅಂದಿನಿಂದ ಇಂದಿನವರೆಗೂ ಸಂಪ್ರದಾಯವನ್ನು ಊರಿನ ಉದ್ಧಾರಕ್ಕಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಗ್ರಾಮಸ್ಥರಾದ ಮೂರ್ತಿ, ತಿಮ್ಮಪ್ಪ, ಮಾರಪ್ಪ ರಮೇಶ್, ರಾಮಪ್ಪ ಇದ್ದರು.