

ಹನೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ 100ಕ್ಕೆ 100ರಷ್ಟು ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಆರ್.ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜ.16 ರಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೆಂಗಳೂರಿಗೆ ಆಗಮಿಸುವ ಹಿನ್ನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಂಚಾಯತ್‌ರಾಜ್ ಕಾಯ್ದೆಯನ್ನು ತಿದ್ದುಪಡಿ ತರುವುದರ ಮೂಲಕ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿದ್ದು, ಆಡಳಿತದ ಅವಕಾಶ ಒದಗಿಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸಂದ ಗೌರವ. ಈ ದಿಸೆಯಲ್ಲಿ ಇಂದು ಮಹಿಳೆಯರು ಸಂಘಟಿತರಾಗುತ್ತಿರುವುದು ಮೆಚ್ಚುಗೆಯ ಸಂಗತಿ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಜ.16 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಾ ನಾಯಕಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ಹನೂರು ಕ್ಷೇತ್ರದಿಂದ ಮಹಿಳಾ ಕಾರ್ಯಕರ್ತರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ: ಕಳೆದ ಬಾರಿ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ 167 ಭರವಸೆಗಳನ್ನು ನೀಡಿದ್ದು, ಅದರಲ್ಲಿ 164 ಭರವಸೆಗಳನ್ನು ಈಡೇರಿಸುವುದರ ಮೂಲಕ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಈ ಬಗ್ಗೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಬಾರಿಯ ಚುನಾವಣೆಗೆ ಪ್ರಣಾಳಿಕೆ ಸಿದ್ಧವಾಗುತ್ತಿದ್ದು, ಅದರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಘೋಷಿಸಿದೆ ಎಂದರು.
ಇದೇ ವೇಳೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ಧ ಹನೂರಿನ ಎಂ. ಪ್ರದೀಪ್‌ಕುಮಾರ್ ಅವರು ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಜಿಪಂ ಮಾಜಿ ಅಧ್ಯಕ್ಷೆ ಶಿವಮ್ಮ, ಮಾಜಿ ಉಪಾಧ್ಯಕ್ಷ ಬಸವರಾಜು, ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸೋಮಶೇಖರ್, ಸಂಪತ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಸುಧಾ, ಸದಸ್ಯರಾದ ಬಂಡಳ್ಳಿಯ ತಾರೀಖ್ ಆಹಮದ್, ಬೆಳತ್ತೂರಿನ ನಾಗಣ್ಣ, ಅಶೋಕ್‌ಕುಮಾರ್, ಮಂಗಲದ ಸಿ.ಪ್ರಭು, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಹನೂರು ಘಟಕಾಧ್ಯಕ್ಷ ಮಾದೇಶ್, ಮುಖಂಡರಾದ ಸಿದ್ದರಾಜು, ಮಣಿ, ನಾಗರಾಜು, ಶಾಗ್ಯ ಮಲ್ಲೇಶ್, ನಟರಾಜು ಹಾಗೂ ಇನ್ನಿತರರು ಇದ್ದರು.