

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಸಾರ್ವಕಾಲಿಕ ಎಂದು ಗಾಂಧೀ ಪ್ರತಿಷ್ಠಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಬೆಳಗಾವಿ- 1924 (ಮಹಾತ್ಮರ ಕಾಂಗ್ರೆಸ್ ಅಧ್ಯಕ್ಷತೆಯ 100ನೇ ಸಂಭ್ರಮ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ರಾಜಕೀಯ ಸ್ವಾತಂತ್ರ‍್ಯ ಗಾಂಧೀಜಿಯವರ ಗುರಿಯಾಗಿರಲಿಲ್ಲ. ಆರ್ಥಿಕ ಪ್ರಗತಿ, ಮೇಲು- ಕೀಳು ಭಾವ ಹೋಗಲಾಡಿಸಲು ಬಯಸಿದ್ದರು. ಅವರು ತಮ್ಮ ಕಾಲದ ಧುರೀಣರನ್ನು ಅಸಡ್ಡೆಯಿಂದ ಕಂಡವರಲ್ಲ. ಅವರ ಬಗ್ಗೆ ಎಂದೂ ಸಲ್ಲದ ಪ್ರತಿಕ್ರಿಯೆಯನ್ನು ನೀಡಿದವರಲ್ಲ. ವೈಚಾರಿಕ ಭಿನ್ನಾಭಿಪ್ರಾಯ ಇದ್ದಾಗಲೂ ಸಮಾಧಾನ, ಗೌರವದಿಂದ ಮೌಲ್ಯಯುತವಾಗಿ ಬಗೆಹರಿಸಿ ಒಗ್ಗೂಡಿಸಿಕೊಂಡು ಹೋಗುತ್ತಿದ್ದರು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಗಾಂಽ ಅಧ್ಯಯನ ಪೀಠದ ಮಾಜಿ ಅಧ್ಯಕ್ಷ ಪ್ರೊ. ಶಿವಾನಂದ ಶೆಟ್ಟರ ಮಾತನಾಡಿ, ಗಾಂಧೀಜಿಯವರ ಚಿಂತನೆ ಸಾರ್ವತ್ರಿಕವಾಗಿತ್ತು. ಅವರ ತತ್ವಗಳು ಬಲಪ್ರಯೋಗದ ಹೇರಿಕೆಗಳಾಗಿರಲಿಲ್ಲ. ಪ್ರತಿಯೊಬ್ಬರ ಅನಿಸಿಕೆಗಳನ್ನು ಒಗ್ಗೂಡಿಸಿ ಅದನ್ನು ಪ್ರತಿಪಾದಿಸುತ್ತಿದ್ದರು ಎಂದರು.
ಗಾಂಧಿಚಿಂತಕ ಹೇಮಂತ ನಾಡಿಗೇರ ಮಾತನಾಡಿ, ಮಹಾತ್ಮರು ಇದ್ದಾಗ ಭಾರತ ವಿಭಜನೆ ಆಗಿದ್ದು ವಿಷಾದಕರ ಎಂದರು.
ಗಾ0ಧಿವಾದಿ ಡಾ. ಎಂ.ಎಚ್. ಪಾಟೀಲ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ಬಂದಿದ್ದೇನೋ ನಿಜ. ಆದರೆ, ಇಲ್ಲಿರುವುದು ಪ್ರಜಾಪ್ರತಿನಿಽಗಳ ಸ್ವಾತಂತ್ರ‍್ಯ ಎಂದು ವ್ಯಂಗ್ಯವಾಡಿದರು.
ವೇದಿಕೆಯ ಸಂಯೋಜಕ ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಶ್ರೀಶೈಲಗೌಡ ಕಮತರ ನಿರೂಪಿಸಿದರು.
ಶಿಕ್ಷಕ ಕಣವಿ ಅವರ ನೇತೃತ್ವದಲ್ಲಿ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವೋ ಜನತೋ ಹಾಗೂ ರಘುಪತಿ ರಾಘವ ರಾಜಾರಾಮ ಭಜನೆಗಳನ್ನು ಹಾಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ, ಡಾ. ಜಿನದತ್ತ ಹಡಗಲಿ, ವೀರಣ್ಣ ಒಡ್ಡೀನ, ಡಾ. ಸಂಜೀವ ಕುಲಕರ್ಣಿ, ಸರೋಜಾ ಕುಲಕರ್ಣಿ, ಇತರರಿದ್ದರು.