ಬಜೆಟ್ ನಂತರ ಮಂಟೂರ ರಸ್ತೆಯ 1 ಸಾವಿರ ಮನೆಗಳ ಹಂಚಿಕೆ

New Abbayya
Published on

ಹುಬ್ಬಳ್ಳಿ : ಇಲ್ಲಿನ ಮಂಟೂರ ರೋಡ್​ನಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ವಿುಸುತ್ತಿರುವ 1,300 ಮನೆಗಳ ಪೈಕಿ 1 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಬಜೆಟ್ ಅಧಿವೇಶನದ ನಂತರ ಚಾಲನೆ ನೀಡಲಿದ್ದಾರೆ.

ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಮಂಟೂರ ರಸ್ತೆಯಲ್ಲಿ ನಿರ್ವಿುಸುತ್ತಿರುವ ಮನೆಗಳನ್ನು ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಬೆಂಗಳೂರಿನ ಮೆರ್ವಿಕ್ ಕನಸ್ಟ್ರಕ್ಷನ್ ಕಂಪನಿಯು 73 ಕೋಟಿ ರೂ. ವೆಚ್ಚದಲ್ಲಿ 1,300 ಮನೆಗಳನ್ನು ನಿಮಾಣ ಮಾಡುತ್ತಿದೆ. ಈಗಾಗಲೇ 672 ಮನೆಗಳು ಹಂಚಿಕೆಗೆ ಸಿದ್ಧವಾಗಿವೆ. ಇನ್ನೂ ಒಂದು ತಿಂಗಳು ಕಾಲಾವಕಾಶ ಇರುವುದರಿಂದ ಸುಮಾರು 1 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. 1,300 ಮನೆಗಳ ಜೊತೆಗೆ 320 ಮನೆಗಳನ್ನು ಪೌರ ಕಾರ್ವಿುಕರಿಗಾಗಿ ನಿರ್ವಿುಸಲಾಗುತ್ತಿದೆ. ಅಲ್ಲದೇ 260 ಮತ್ತು 780 ಮನೆಗಳನ್ನು ನಿಮಾಣ ಮಾಡಲಾಗುತ್ತಿದೆ. ಒಂದು ಮನೆಗೆ 7.58 ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ ಪ್ರತಿ ಫಲಾನುಭವಿ 50 ಸಾವಿರ ರೂ. ಪಾವತಿಸಿದ್ದಾರೆ ಎಂದರು.

ಹುಬ್ಬಳ್ಳಿ -ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 38 ಸ್ಲಂಗಳಿವೆ. 7,358 ಕುಟುಂಬಗಳಿದ್ದು, 1264 ಕುಟುಂಬಗಳಿಗೆ ಮನೆಗಳನ್ನು ನೀಡಲಾಗುವುದು. 2014 ರಿಂದ ಸುಮಾರು 16 ಸಾವಿರ ಅರ್ಜಿಗಳು ಬಂದಿವೆ. ಹಂತ ಹಂತವಾಗಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.

ಮನೆಗಳ ಫಿನಿಶಿಂಗ್ ಸರಿಯಾಗಿ ಇರದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಬ್ಬಯ್ಯ, ಶೀಘ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳೊಂದಿಗೆ ಮನೆಗಳ ವೀಕ್ಷಣೆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಗುತ್ತಿಗೆದಾರರು ಸ್ಥಳದಲ್ಲಿ ಹಾಜರಿರಲಿಲ್ಲ. ಗುತ್ತಿಗೆದಾರರಿಗೆ ಮೋಬೈಲ್ ಕರೆ ಮಾಡಿದ ಅಬ್ಬಯ್ಯ, ತರಾಟೆ ತೆಗೆದುಕೊಂಡರು.

ಈಗಾಗಲೇ ಮನೆಗಳಿಗೆ ಬಣ್ಣ ಹಚ್ಚುವಿಕೆ, ಟೈಲ್ಸ್ ಅಳವಡಿಸುವಿಕೆ, ಬಾಗಿಲು ಅಳವಡಿಕೆ ಕೆಲಸಗಳು ಪೂರ್ಣಗೊಂಡಿವೆ. ವಿದ್ಯುತ್ ಸಂಪರ್ಕದ ಕೆಲಸ ಬಾಕಿ ಇದೆ. ಕೆಲವು ಲೋಪದೋಷಗಳನ್ನು ಹೊರತುಪಡಿಸಿದರೆ ಮನೆಗಳ ಗುಣಮಟ್ಟ ಉತ್ತಮವಾಗಿದೆ. ಲೋಪಗಳನ್ನು ಸರಿಪಡಿಸಲಾಗಿದೆ ಎಂದರು.

ನಂತರ ಚಾಮುಂಡೇಶ್ವರಿ ನಗರದಲ್ಲಿ ನಿರ್ವಿುಸುತ್ತಿರುವ ಮನೆಗಳನ್ನು ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರೊಂದಿಗೆ ವೀಕ್ಷಿಸಿದ ಪ್ರಸಾದ ಅಬ್ಬಯ್ಯ, ಮನೆಗಳ ಪಕ್ಕದಲ್ಲಿ ರೈಲ್ವೆ ಹಳಿ ಹಾದು ಹೋಗಿರುವುರಿಂದ ಮನೆಗಳಿಗೆ ಹಾನಿ ಆಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು, ಬಲಿಷ್ಠ ಮನೆಗಳನ್ನು ನಿಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ಯಾನಗರದಲ್ಲಿ ಈ ಮೊದಲು ನಿರ್ವಿುಸಿರುವ 400 ಮನೆಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಬ್ಬಯ್ಯ, ಈಗಿರುವ ಮನೆಗಳನ್ನು ನೆಲಸಮಗೊಳಿಸಿ ಮರಳಿ ನಿರ್ವಿುಸುವ ಬಗ್ಗೆ ಶೀಘ್ರ ತೀರ್ವನಿಸಲಾಗುವುದು ಎಂದು ತಿಳಿಸಿದರು.

ಅಲ್ಲಿನ 400 ಮನೆಗಳಲ್ಲಿ ಸುಮಾರು 200 ಮನೆಗಳನ್ನು ಮರು ಮಾರಾಟ ಮಾಡಲಾಗಿದೆ. 100 ಮನೆಗಳು ಈಗಾಗಲೇ ನೆಲಸಮಗೊಂಡಿವೆ.

ಗಿರಣಿಚಾಳದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ನಿಮಾಣ ಮಾಡಲು ಉದ್ದೇಶಿಸಿರುವ ಜಾಗದ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಮನೆಗಳ ನಿಮಾಣದ ಕುರಿತು ಸೂಕ್ತ ತೀಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಮಂಡಳಿಯ ಆಯುಕ್ತ ಅಶೋಕ ಡಿ.ಆರ್., ಮುಖ್ಯ ಇಂಜಿನಿಯರ್ ಎಚ್.ಪಿ.ಸುಧೀರ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ, ಸಹಾಯಕ ನಿರ್ದೇಶಕ ಮಹಾಂತೇಶ ಪಾಟೀಲ, ವಿಶೇಷ ಅಧಿಕಾರಿ ಮುನಿರಾಜ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net