

ಬೀದರ್: ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ 100 ಜನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೂಲಿ ಕಾರ್ಮಿಕರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ತಪಾಸಣೆ ನಡೆಸಿ, ಉಚಿತ ಔಷಧಿ ವಿತರಿಸಲಾಯಿತು.
ನರೇಗಾ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ನರೇಗಾ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ನರೇಗಾ ಕಾರ್ಮಿಕರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಪಿಡಿಒ ಗಾಯತ್ರಿದೇವಿ ಹೊಸಮನಿ ಹೇಳಿದರು.
ಕೂಲಿ ಕಾರ್ಮಿಕರಿಗೆ ಗ್ರಾಮಗಳಲ್ಲೇ ಕೆಲಸ ಒದಗಿಸುವುದು ಖಾತರಿ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ ಕೂಲಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗಬಾರದು. ಗ್ರಾಮದಲ್ಲೇ ಯೋಜನೆಯಡಿ ಕೆಲಸ ಮಾಡಿ ನೆಮ್ಮದಿಯ ಜೀವನ ಸಾಗಿಸಬೇಕು ಎಂದರು.
ಖಾತರಿ ಯೋಜನೆಯಡಿ 100 ದಿನ ಕೆಲಸ ಮಾಡಿದ ಕೂಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕೇಕ್ ಕತ್ತರಿಸಿ ನರೇಗಾ ದಿನ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ರಾಹುಲ್, ಸದಸ್ಯರಾದ ರಾಜಕುಮಾರ ಪಾಟೀಲ, ಸಂಜುಕುಮಾರ, ಧನರಾಜ ತಾಜಲಾಪುರೆ ಮತ್ತಿತರರು ಇದ್ದರು.