100 ವಸಂತ ಪೂರೈಸಿದ ಕೊರಚರಪಾಳ್ಯ ಸರ್ಕಾರಿ ಶಾಲೆ

school
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣ ಎಲ್ಲರಿಗೂ ಸಿಗುತ್ತಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜದ ಎಲ್ಲ ವರ್ಗಗಳಿಗೆ ಶಿಕ್ಷಣ ಕಲ್ಪಿಸಲು ಶಾಲಾ-ಕಾಲೇಜುಗಳನ್ನು ತೆರೆದರು. 1919ರ ಜಸ್ಟೀಸ್ ಮಿಲ್ಲರ್ ಸಮಿತಿ ಶಿಫಾರಸ್ಸಿನಂತೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಯತ್ನ ಆರಂಭವಾಯಿತು. ಈ ನಿಟ್ಟಿನಲ್ಲಿ ಆರಂಭವಾದ ಶಾಲೆಗಳಲ್ಲಿ ಕೊರಚರಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯೂ ಒಂದು. ಅಂದಿನ ಮೈಸೂರು ಸರ್ಕಾರ 1925ರಲ್ಲಿ ಕೊರಚರಪಾಳ್ಯದಲ್ಲಿ ಶಾಲೆ ಪ್ರಾರಂಭಿಸಿತು. ಇದೀಗ ಈ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ.

ಹಳೆಯ ಹೆಂಚಿನ ಕಟ್ಟಡದಲ್ಲಿ ಶಾಲೆ ಆರಂಭವಾಗಿ ನಂತರ ಸರ್ಕಾರದ ಅನುದಾನ ಮತ್ತು ದಾನಿಗಳ ನೆರವಿನಿಂದ ಹೊಸ ಕೊಠಡಿಗಳು ನಿರ್ಮಾಣಗೊಂಡವು, ದೇವನಹಳ್ಳಿ ಟೌನ್ ಮದ್ದಯ್ಯ ಕುಟುಂಬ ಮತ್ತು ಅಬಕಾರಿ ಗುತ್ತಿಗೆದಾರ ಗುದ್ರಪ್ಪರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಟಾನ ಸರ್ಕಾರಿ ಶಾಲೆಗಳಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿರುವುದಲ್ಲದೇ 6 ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಇವುಗಳಲ್ಲಿ ಕೊರಚರಪಾಳ್ಯವೂ ಒಂದಾಗಿದೆ. ನೆಲ ಅಂತಸ್ತು ಮತ್ತು 2 ಅಂತಸ್ತುಗಳನ್ನೊಳಗೊಂಡ ಭವ್ಯ ಕಟ್ಟಡ ನಿರ್ಮಿಸಿಕೊಟ್ಟಿದೆ.

ನಮ್ಮ ಕೊರಚರಪಾಳ್ಯಶಾಲೆ ಸಂಚಿಕೆ: ಶತಮಾನೋತ್ಸವ ಆಚರಿಸಲು ಶಾಲೆ ಸಿಬ್ಬಂದಿ, ಹಳೆಯ ವಿದ್ಯಾರ್ಥಿ ಸಂಘ ಹಾಗೂ ಕೆಐಎಎ್ ಸಹಯೋಗದಲ್ಲಿ ಸಭೆಗಳು ಜರುಗಿದವು, ಸಾಧನೆಯ ಹಾದಿಯಲ್ಲಿ ನಮ್ಮ ಕೊರಚರಪಾಳ್ಯ ಶಾಲೆ ಎಂಬ ಶೀರ್ಷಿಕೆಯಲ್ಲಿ ಸಂಚಿಕೆ ಹೊರತರಲಾಗುತ್ತಿದ್ದು, ಇದರಲ್ಲಿ ವಿದ್ಯಾರ್ಥಿಗಳ ಸಾಧನೆಗಳು ಶಾಲೆಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಬಗ್ಗೆ ಮಾಹಿತಿ, ಲೇಖನಗಳು, ಬರಹಗಳು ಹಾಗೂ ಕವನಗಳು ಅಭಿವ್ಯಕ್ತವಾಗಿವೆ. ಇದಕ್ಕೆ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ. ಚಂದ್ರಣ್ಣ, ಗೌರವಾಧ್ಯಕ್ಷ ಸಿ. ಜಗನ್ನಾಥ, ಕಾರ್ಯದರ್ಶಿ ಪಿ. ಗಂಗಾಧರಪ್ಪ, ಖಜಾಂಚಿ ಶ್ರೀರಾಮಯ್ಯ, ಮುಖ್ಯ ಶಿಕ್ಷಕ ಬಿ. ಪುಟ್ಟಸ್ವಾಮಿ ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಭಾಜನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net