

ಮೈಸೂರು: ದೇಶದಲ್ಲಿ ವಾರ್ಷಿಕ 100 ಸಾವಿರ ಕೋಟಿ ಆಹಾರ ಉತ್ಪನ್ನಗಳು ವ್ಯರ್ಥವಾಗುತ್ತಿದ್ದು, ಈ ವ್ಯರ್ಥದ ಪ್ರಮಾಣವನ್ನು ಹೇಗೆ ಕಡಿಮೆ ಮಾಡಬೇಕು ಎಂಬುದು ನಮ್ಮೆಲ್ಲರ ಮುಂದಿರುವ ಸವಾಲಾಗಿದೆ ಎಂದು ಹರಿಯಾಣದ ಎನ್‌ಐಎಫ್‌ಟಿಇಎಂ ಕುಲಪತಿ ಡಾ.ಚಿಂದಿ ವಾಸುದೇವಪ್ಪ ಹೇಳಿದರು.
ನಗರದ ಸಿಎಫ್‌ಟಿಆರ್‌ಐನಲ್ಲಿ ಮಂಗಳವಾರ ಹಮ್ಮಿಕೊಂಡ ಸಿಎಸ್‌ಐಆರ್ ಸಂಸ್ಥಾನ ದಿನ ಹಾಗೂ ವಿಶ್ವ ಆಹಾರ ದಿನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಹೊಂದಿದರೂ ದೇಶವನ್ನು ಹಸಿವು ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಅಹಾರ ಉತ್ಪನ್ನಗಳು ವ್ಯರ್ಥವಾಗುತ್ತಿರುವುದು ಹಾಗೂ ಸರಿಯಾದ ತಂತ್ರಜ್ಞಾನ ಬಳಕೆ ಮಾಡಿಕೊಳ್ಳದೆ ಇರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.
ಹೊಲ, ಗದ್ದೆಗಳಲ್ಲಿ ಶೇ.20 ರಷ್ಟು ಆಹಾರ ಉತ್ಪನ್ನಗಳು ವ್ಯರ್ಥವಾಗುತ್ತಿವೆ. ಅದೇ ರೀತಿ ದಾಸ್ತಾನು ಕೇಂದ್ರಗಳಲ್ಲಿ ಶೇ.20 ರಷ್ಟು, ಮಾರುಕಟ್ಟೆಯಲ್ಲಿ ಶೇ.5 ರಿಂದ 20 ರಷ್ಟು, ಸಾಗಾಟ ಸಂದರ್ಭ ಶೇ.5 ರಿಂದ 15 ರಷ್ಟು ಆಹಾರ ಉತ್ಪನ್ನಗಳು ವ್ಯರ್ಥವಾಗುತ್ತಿದೆ. ಈ ಪೈಕಿ ಹಣ್ಣು ಮತ್ತು ತರಕಾರಿ ಶೇ.45 ರಷ್ಟು, ಧಾನ್ಯಗಳು ಶೇ.30 ರಷ್ಟು, ಡೈರಿ ಉತ್ಪನ್ನಗಳು ಶೇ.20 ರಷ್ಟು, ಎಣ್ಣೆ ಕಾಳುಗಳು ಶೇ.20 ರಷ್ಟು, ಮತ್ಸೃ ಶೇ.35, ಮಾಂಸ ಶೇ.20 ರಷ್ಟು ವ್ಯರ್ಥವಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಅಡುಗೆ ತಯಾರಿಸುವ ಸಂದರ್ಭ ಹಾಗೂ ಬಳಕೆ ಸಂದರ್ಭದಲ್ಲೂ ದೊಡ್ಡ ಪ್ರಮಾಣದಲ್ಲಿ ಅಹಾರ ವ್ಯರ್ಥವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
2030ರ ವೇಳೆಗೆ ಆಹಾರ ಉತ್ಪನ್ನಗಳ ನಷ್ಟದ ಪ್ರಮಾಣವನ್ನು ಶೂನ್ಯಕ್ಕೆ ಇಳಿಕೆ ಮಾಡಬೇಕು ಎಂಬುದು ವಿಶ್ವ ಸಂಸ್ಥೆಯ ಗುರಿಯಾಗಿದೆ. ಈ ಗುರಿ ಸಾಧನೆಯ ಹಾದಿ ಸುಲಭವೇನು ಅಲ್ಲ. ಆದರೆ, ಈ ನಿಟ್ಟಿನಲ್ಲಿ ಆಹಾರ ವಿಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರು ಶ್ರಮಿಸುವ ಅವಶ್ಯಕತೆ ಇದೆ. ಆಹಾರ ಉತ್ಪನ್ನಗಳು ವ್ಯರ್ಥವಾಗುವ ಪ್ರಮಾಣವನ್ನು ಆದಷ್ಟು ತಗ್ಗಿಸಬೇಕು. ಒಂದುವೇಳೆ ವ್ಯರ್ಥವಾದರೆ ವ್ಯರ್ಥವಾದ ಆಹಾರ ಉತ್ಪನ್ನವನ್ನು ಆಹಾರವಲ್ಲದ ಬೇರೆ ಮೌಲ್ಯವರ್ಧಿತ ಉತ್ಪನ್ನವಾಗಿ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಕುರಿತು ಕುರಿತು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ವೈವಿಧ್ಯಮಯ ಹವಾಗುಣವಿದ್ದು, ಪ್ರತಿಯೊಂದು ಪ್ರದೇಶಗಳಲ್ಲೂ ವೈವಿಧ್ಯಮವಾದ ಹಣ್ಣು, ಹಂಪಲು, ತರಕಾರಿ ಹಾಗೂ ಅಹಾರದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಿಶ್ವದ ಯಾವುದೇ ಭಾಗದಲ್ಲೂ ಬೆಳೆಯದ ಕೆಲವು ಅಪರೂಪದ ಹಣ್ಣು, ಹಂಪಲು, ತರಕಾರಿ ಹಾಗೂ ಅಹಾರದ ಬೆಳೆಗಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿದೆ. ಅವುಗಳನ್ನು ವ್ಯರ್ಥವಾಗದ ರೀತಿಯಲ್ಲಿ ಕೊಯ್ಲು ಮಾಡಿ ಸಂಸ್ಕರಣೆ ಮಾಡಿ ಉತ್ತಮ ಮಾರುಕಟ್ಟೆ ಕಂಡುಕೊಳ್ಳಬೇಕು. ನಮ್ಮಲ್ಲಿ ಹಾಲು, ಬಾಳೆಹಣ್ಣು, ಮಾವು, ಪಪ್ಪಾಯ, ಪೇರಲ, ಶುಂಠಿ, ಬೆಂಡೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಭತ್ತ, ಗೋದಿ, ಟೀ, ತರಕಾರಿ, ಸಕ್ಕರೆ, ಗೋಡಂಬಿ ಉತ್ಪಾದನೆಯಲ್ಲಿ ನಾವು ವಿಶ್ವದಲ್ಲಿ 2ನೇ ಸ್ಥಾನದಲ್ಲಿ ಇದ್ದೇವೆ ಎಂದರು.
ಇತ್ತೀಚೆಗೆ ದೇಶದಲ್ಲಿ ಆಹಾರ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಜಪಾನ್, ಚೀನಾ, ಆಫ್ರಿಕಾ ಮತ್ತು ಅರಬ್ ದೇಶಗಳು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದು ಆಶಾಯದಾಯಕ ಬೆಳ ವಣಿಗೆ. ದೇಶದಲ್ಲಿ ಆಹಾರ ಸಂಸ್ಕರಣಾ ಕೇಂದ್ರಗಳ ಸಂಖ್ಯೆಯೂ ಹೆಚ್ಚುತ್ತಿದೆ ದೇಶದಲ್ಲಿ ನೋಂದಾಯಿತ ಆಹಾರ ಸಂಸ್ಕರಣಾ ಕೇಂದ್ರಗಳು 20.05 ಲಕ್ಷ ಜನರಿಗೆ ಉದ್ಯೋಗ ನೀಡಿದ್ದು, ಅಸಂಘಟಿತ ವಲಯದ ಆಹಾರ ಸಂಸ್ಕರಣಾ ಕೇಂದ್ರಗಳು 51.11 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಈ ಉದ್ಯಮವು 20014 ರಿಂದ 2020ರ ಅವಧಿಯಲ್ಲಿ ಶೇ.11.18 ರಷ್ಟು ಬೆಳವಣಿಗೆಯನ್ನು ಕಂಡಿದೆ. ಸರ್ಕಾರ ಸಹ ವಿವಿಧ ಯೋಜನೆಗಳ ಮೂಲಕ ಆಹಾರ ಉದ್ಯಮದ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದೆ. ಈ ಎಲ್ಲ ಬೆಳವಣಿ ಗೆಗಳು ಮುಂದೆ ದೇಶದಲ್ಲಿ ಆಹಾರ ವ್ಯರ್ಥವಾಗುವ ಪ್ರಮಾಣವನ್ನು ತಗ್ಗಿಸಲಿದೆ ಎಂದು ಹೇಳಿದರು.
ದೇಶ ಇಷ್ಟೆಲ್ಲ ಆಹಾರ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದರೂ ದೇಶ ಶೇ.25 ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಪ್ರಮಾಣ ಗ್ರಾಮೀಣ ಭಾಗದಲ್ಲಿ ಹೆಚ್ಚಿದೆ. ಅಧ್ಯಯನವೊಂದರ ವರದಿ ಪ್ರಕಾರ ಗ್ರಾಮೀಣ ಭಾಗದಲ್ಲಿ 5 ವರ್ಷದೊಳಗಿನ ಶೇ.41 ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.31 ರಷ್ಟು ಮಕ್ಕಳು ಅಪೌಷ್ಟಿಕತೆ ಸಮಸ್ಯೆಗೆ ಸಿಲುಕಿ ಅವರ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಹಾರ ಉತ್ಪನ್ನಗಳ ಪ್ರತಿಯೊಂದು ಅಂಶಗಳನ್ನು ಸಹ ಬಳಕೆ ಮಾಡಿಕೊಳ್ಳಲು ಹೊಸ ಆವಿಷ್ಕಾರಗಳು ನಡೆಯಬೇಕು. ಕಲ್ಲಂಗಡಿ ಸಿಪ್ಪೆಯಿಂದ ಉಪ್ಪಿನಕಾಯಿ, ಕ್ಯಾರೆಟ್ ತಿರುಳಿನಿಂದ ಚೀಸ್‌ಕೇಕ್, ಬಾಳೆ ಹಣ್ಣಿನ ಸಿಪ್ಪೆಯ ಚಟ್ನಿ, ಹಲಸಿನ ಬೀಜದ ಪುಡಿ ಚಟ್ನಿ ತಯಾರಿಸಲಾಗಿದ್ದು, ಇದರಲ್ಲಿ ಪೌಷ್ಟಿಕಾಂಶದ ಪ್ರಮಾಣ ಹೆಚ್ಚಿದೆ. ಈ ರೀತಿ ವ್ಯರ್ಥವಾಗುವ ಆಹಾರದ ಮೌಲ್ಯವರ್ಧನೆ ಮಾಡುವ ಹೊಣೆಗಾರಿಕೆ ಆಹಾರ ವಿಜ್ಞಾನಿಗಳ ಮೇಲಿದೆ ಎಂದು ಹೇಳಿದರು.
ಆಹಾರ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಇದ್ದು, ಆ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು. ಕೇವಲ ಆಹಾರ ಉತ್ಪನ್ನಗಳನ್ನು ಉತ್ಪಾದಿಸಿದರೆ ಸಾಲದು ಅವು ಗುಣಮಟ್ಟದಿಂದ ಕೂಡಿರಬೇಕು ಹಾಗೂ ವಿಷ ಮುಕ್ತವಾಗಿಬೇಕು. ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯ ಪ್ರಮಾಣ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಆರ್‌ಬಿಐ ನೋಟುಮುದ್ರಣಾಲಯದ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್.ಕೆ. ಲಾಭ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಇದ್ದರು.