

ಶಿವಮೊಗ್ಗ: ಹಿಂದು ಹೆಣ್ಣು ಮಕ್ಕಳ ಸುರಕ್ಷೆಗಾಗಿ 100 ಕಡೆ ತ್ರಿಶೂಲ ದೀಕ್ಷಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ 8 ಕಡೆ ಕಾರ್ಯಕ್ರಮ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲೂ ಆಯೋಜನೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳ ಕೈಗೆ ತ್ರಿಶೂಲ ಕೊಟ್ಟು ಆತ್ಮರಕ್ಷಣೆ ಮಾಡಿಕೊಳ್ಳುವಂತೆ ಧೈರ್ಯ ತುಂಬುವ ಕೆಲಸವನ್ನು ಶ್ರೀರಾಮ ಸೇನೆ ಮಾಡಲಿದೆ. ಕೊಲೆ, ಗಲಭೆ ಎಬ್ಬಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಹೆಣ್ಣು ಮಕ್ಕಳ ಸುರಕ್ಷತೆಗೆ ಒತ್ತು ನೀಡುವುದು ಗುರಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನೇನು ಭಯೋತ್ಪಾದಕನಾ? ಅತ್ಯಾಚಾರಿನಾ? ದರೋಡೆಕೋರನಾ? ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದರು. ಹಾವೇರಿ, ಮೈಸೂರು ಸೇರಿ ನಾಲ್ಕು ಕಡೆ ಲವ್ ಜಿಹಾದ್ ಪುಸ್ತಕ ಯಾವುದೇ ಅಡೆತಡೆ ಇಲ್ಲದೆ ಬಿಡುಗಡೆಯಾಗಿದೆ. ಡಿಸಿ, ಎಸ್ಪಿ ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡುವುದು ಬೇಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಫೆ.27ರಂದು ರಾತ್ರಿ ಪೊಲೀಸರು ನಡೆದುಕೊಂಡ ರೀತಿ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ ಯಾವುದೇ ಪಕ್ಷ ಅಥವಾ ವ್ಯಕ್ತಿ ಮುಖ್ಯವಲ್ಲ. ಹಿಂದು ಹೆಣ್ಣು ಮಕ್ಕಳ ಸುರಕ್ಷತೆ ಮುಖ್ಯ ಎಂದು ಸ್ಪಷ್ಟಪಡಿಸಿದರು. ಸೌಜನ್ಯ ಕೊಲೆ ಪ್ರಕರಣದ ನಿಜವಾದ ಆರೋಪಿ ಬಂಧನ ಆಗಬೇಕು ಎನ್ನುವುದು ನನ್ನ ಒತ್ತಾಯ ಕೂಡ ಆಗಿದೆ ಎಂದರು.