

ಬೆಂಗಳೂರು: ಸರ್ಕಾರದ ಯೋಜನೆಗಳು, ತಹಸೀಲ್ದಾರ್ ಕಚೇರಿಯಲ್ಲಿ ಸಿಗುವ ಪ್ರಮಾಣಪತ್ರಗಳು ಹಾಗೂ ವಿವಿಧ ಸೇವೆಗಳು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೇ ಸಿಗುವ ಗ್ರಾಮ ಒನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಣರಾಜ್ಯೋತ್ಸವ ಕೊಡುಗೆಯಾಗಿ ಬುಧವಾರ ಚಾಲನೆ ನೀಡಿದರು. 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ 12 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.
ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳ 3024 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಆರಂಭವಾಗುತ್ತಿದೆ. ಗ್ರಾಮೀಣ ಭಾಗದ ಜನ ಇನ್ನುಮುಂದೆ ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಅಗತ್ಯ ಇರುವುದಿಲ್ಲ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರಿಂದ ಜನರಿಗಾಗಿ ಇರುವ ಜನರ ಸರ್ಕಾರ ಜನ ಸ್ಪಂದನೆಗಾಗಿ ತಾಂತ್ರಿಕತೆಯಿಂದ ಕೂಡಿದ ಗ್ರಾಮ ಒನ್ ಸೇವೆಯನ್ನು ಆರಂಭಿಸಿದ್ದೇವೆ. ತಹಸೀಲ್ದಾರ್ ಕಚೇರಿಯಲ್ಲಿ ಬಹಳಷ್ಟು ಜನದಟ್ಟಣೆ ಇರುತ್ತದೆ ಎಂದರು.
ಒಂದು ಸೇವೆಗೆ 2-3 ದಿನ ಅಲೆದಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಈ ಸೇವೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯಿತಿ, ತಹಸೀಲ್ದಾರ್, ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಎಸಿ ಕಚೇರಿಗಳ ನಡುವೆ ನಿರಂತರ ಇಂಟರ್ನೆಟ್ ಸಂಪರ್ಕ ಇರುವಂತೆ ನೋಡಿಕೊಳ್ಳಲಾಗುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸಾಮರ್ಥ್ಯದ ಕಂಪ್ಯೂಟರ್ ಅಳವಡಿಸಲಾಗುತ್ತದೆ. ಆಧಾರ್, ಬ್ಯಾಂಕಿಂಗ್ ಸೇರಿ 100 ಸೇವೆಗಳನ್ನು ನೀಡುವ ಉದ್ದೇಶ ಇದೆ. ತಕ್ಷಣಕ್ಕೆ 15ರಿಂದ 20 ಸೇವೆಗಳನ್ನು ಆರಂಭಿಸಲಾಗುತ್ತದೆ ಎಂದು ವಿವರಿಸಿದರು.
6 ಲಕ್ಷ ಜನರಿಗೆ ಸೇವೆ: ಪ್ರಾಯೋಗಿಕವಾಗಿ ಜಾರಿಯಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 6 ಲಕ್ಷ ಜನರಿಗೆ ಸರ್ಕಾರದ ವಿವಿಧ ಪ್ರ್ರಾಣಪತ್ರಗಳು ಸಿಕ್ಕಿವೆ. ಈ ಯೋಜನೆ ಜನರನ್ನು ಸಶಕ್ತರನ್ನಾಗಿ ಮಾಡುತ್ತದೆ ಎಂಬುದಕ್ಕೆ ಉದಾಹರಣೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಮಧ್ಯವರ್ತಿಗಳ ಹಾವಳಿಯಿಲ್ಲ: ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿದೆ. ಇದನ್ನು ಮೀರಿ ಕಚೇರಿ ಕೆಲಸ ಮಾಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಆದರೆ, ಗಾಮ ಒನ್ ಮೂಲಕ ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ ನಿಗದಿತ ಸಮಯದಲ್ಲಿ ಜನರಿಗೆ ಸೇವೆ ಸಿಗಲಿದೆ.
ದಿನದ 12 ಗಂಟೆ ಲಭ್ಯ: ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಗ್ರಾಮ ಒನ್ ಸೆಂಟರ್ಗಳು ವಾರದ ಏಳೂ ದಿನ ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ಕೆಲಸ ಮಾಡುತ್ತವೆ.
ದರ ನಿಗದಿ: ಪ್ರತಿ ಗ್ರಾಮ ಒನ್ ಕೇಂದ್ರಗಳಲ್ಲೂ ದೊರೆಯುವ ಸೇವೆಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಯಾವುದಕ್ಕೆ ಎಷ್ಟು ಶುಲ್ಕ ಪಾವತಿಸಬೇಕೆಂಬುದನ್ನೂ ಫಲಕದಲ್ಲಿ ಅಳವಡಿಸುವುದು ಕಡ್ಡಾಯ. ಒಂದು ವೇಳೆ ಕೇಂದ್ರದ ಸಿಬ್ಬಂದಿ ಹೆಚ್ಚು ಶುಲ್ಕ ಕೇಳಿದರೆ ಸಹಾಯವಾಣಿ 080-44554455 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.
ಪ್ರತಿ ಹಂತದಲ್ಲಿ ಮಾಹಿತಿ: ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯೊಂದು ಹಂತದ ಮಾಹಿತಿಯೂ ಅರ್ಜಿದಾರರ ಮೊಬೈಲ್ಗೆ ಸಂದೇಶದ ರೂಪದಲ್ಲಿ ಬರಲಿದೆ. ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ವಿಲೇವಾರಿಯಾದ ಬಳಿಕ ಪ್ರಮಾಣ ಪತ್ರ ಸಿದ್ಧಗೊಂಡ ನಂತರವೂ ಮೊಬೈಲ್ಗೆ ಮೆಸೇಜ್ ಬರುತ್ತದೆ. ಆ ಸಂದರ್ಭದಲ್ಲಿ ಗ್ರಾಮ ಒನ್ಗೆ ತೆರಳಿ ಪ್ರಮಾಣಪತ್ರ ಪಡೆಯಬಹುದು.
ಆಲ್ಇನ್ ಒನ್: ಯೋಜನೆಯಡಿ ಶೀಘ್ರ 100ಕ್ಕೂ ಅಧಿಕ ಸೇವೆ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಗ್ರಾಮ ಒನ್ ಪರಿಕಲ್ಪನೆ ಪ್ರಕಾರ, 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಒದಗಿಸಲು ಅವಕಾಶವಿದೆ. ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್ ಸೇವೆ ಗಳು ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಅರ್ಜಿಗಳನ್ನೂ ಇಲ್ಲಿ ಸ್ವೀಕರಿಸಲಾಗುತ್ತದೆ. ನೀರು, ವಿದ್ಯುತ್, ಫೋನ್ ಬಿಲ್ಗಳ ಪಾವತಿಗೂ ಅವಕಾಶವಿದೆ.