

ಹುಬ್ಬಳ್ಳಿ:ಮಹಾರಾಷ್ಟ್ರದ ಪುಣೆಯಲ್ಲಿರುವ ಫ್ಯೂಯಲ್ (ಎಫ್ಯುುಇಎಲ್-ಫ್ರೆಂಡ್ಸ್ ಯೂನಿಯನ್ ಫಾರ್ ಎನ್ಜರ್ೈಜಿಂಗ್ ಲೈವ್ಸ್) ಬಿಜಿನೆಸ್ ಸ್ಕೂಲ್ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜಮೆಂಟ್ (ಪಿಜಿಡಿಎಂ) ಕೋರ್ಸ್ಗೆ ಅರ್ಜಿ ಆಹ್ವಾನಿಸಿದ್ದು, ಮಹಿಳೆಯರಿಗೆ ಬೋಧನಾ ಶುಲ್ಕವು ಶೇ. 100ರಷ್ಟು ವಿದ್ಯಾರ್ಥಿ ವೇತನವನ್ನು ಒಳಗೊಂಡಿರುತ್ತದೆ ಎಂದು ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಕೆಟಿಂಗ್, ಫೈನಾನ್ಸ್, ಎಚ್ಆರ್, ಸಪ್ಲಾಯ್ ಚೈನ್ ವಿಷಯ ಸಂಯೋಜನೆಯ ಪಿಜಿಡಿಎಂ ಕೋರ್ಸ್ಗೆ 60 ಹಾಗೂ ಬಿಜಿನೆಸ್ ಅನಾಲಿಟಿಕ್ಸ್ ವಿಷಯದಲ್ಲಿ ಪಿಜಿಡಿಎಂ ಕೋರ್ಸ್ಗೆ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಇದರಲ್ಲಿ 60 ವಿದ್ಯಾರ್ಥಿನಿಯರಿಗೆ ಶೇ. 100ರಷ್ಟು ವಿದ್ಯಾರ್ಥಿ ವೇತನ ನೀಡಲಾಗುವುದು. ಒರಾಕಲ್ ಕಂಪನಿಯು ಸಿಎಸ್ಆರ್ ಕಾರ್ಯಕ್ರಮದಡಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದರು.
ಪಿಜಿಡಿಎಂ ಕೋರ್ಸ್ ಎಂಬಿಎಗೆ ಸಮಾನವಾಗಿದ್ದು, ಭಾರತ ಸರ್ಕಾರದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅನುಮೋದನೆ ನೀಡಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 11ರಿಂದ ತರಗತಿಗಳು ಆರಂಭವಾಗಲಿವೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಸಲಿದೆ. ಎರಡು ವರ್ಷದ ಕೋರ್ಸ್ ಇದಾಗಿದ್ದು ಪ್ರತಿ ವಿದ್ಯಾರ್ಥಿಗೆ ಸುಮಾರು 8 ಲಕ್ಷ ರೂ. ವಿದ್ಯಾರ್ಥಿ ವೇತನ ಸಿಗಲಿದೆ. ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಒಳಗಿದ್ದರೆ ವಸತಿ ನಿಲಯದ ಸೌಲಭ್ಯ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಲಹೆಗಾರರಾದ ಪಲ್ಲವಿ ಹುರಳಿಕೊಪ್ಪಿ, ಕರ್ನಲ್ ವಿವೇಕ ಇದ್ದರು.