

ಗೋಣಿಕೊಪ್ಪ: ಅರಣ್ಯ ಇಲಾಖೆಯ ಎಲ್ಲ ಹುದ್ದೆಗಳಲ್ಲಿ (ಎಸಿಎಫ್, ಆರ್‌ಫ್‌ಒ, ಡಿವೈಆರ್‌ಎಫ್‌ಒ) ಅರಣ್ಯಶಾಸ್ತ್ರ ಪದವೀಧರರಿಗೆ ಮಾತ್ರ ಶೇ.100 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ಅಧ್ಯಕ್ಷ ಅಕ್ಷಯ್‌ಕುಮಾರ್ ನೇತೃತ್ವದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.
ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಪೊನ್ನಂಪೇಟೆ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಬಳಿ ಬೀದಿ ನಾಟಕದ ಮೂಲಕ ಅರಣ್ಯ ಶಿಕ್ಷಣದ ಮಹತ್ವ ಸಾರಿದರು. ಅರಣ್ಯ ಶಿಕ್ಷಣ ಪಡೆದ ವಿದ್ಯಾರ್ಥಿ ಸರ್ಕಾರದ ನಿರ್ಲಕ್ಷೃಕ್ಕೆ ಬಲಿಯಾಗುವುದನ್ನು ನಾಟಕದ ಮೂಲಕ ಬಿಂಬಿಸಿದರು. ಬಳಿಕ ಪೊನ್ನಂಪೇಟೆ ತಾಲೂಕು ಕಚೇರಿ ಎದುರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಕೆ.ಎನ್.ಮೋಹನ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಎಂ.ಬಿ.ದೀಕ್ಷಿತ್ ಮಾತನಾಡಿ, ಕಳೆದ 2012 ರಿಂದ ಈ ಬಗ್ಗೆ ಹೋರಾಟ ನಡೆಸುತ್ತಿದ್ದು, ಇದೂವರೆಗೂ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಪದವೀಧರರ ಅವಶ್ಯಕತೆ ಮತ್ತು ಉಪಯುಕ್ತತೆಯನ್ನು ಗುರುತಿಸಿ ತಮಿಳುನಾಡು, ತೆಲಂಗಾಣ, ಕೇರಳ, ಒರಿಸ್ಸಾ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌ನಂತಹ ಇತರ ರಾಜ್ಯಗಳು ಅರಣ್ಯ ಇಲಾಖೆಗಳಲ್ಲಿ ಮೀಸಲಾತಿಯನ್ನು ಒದಗಿಸಿವೆ ಎಂದು ತಿಳಿಸಿದರು.
ಅರಣ್ಯಶಾಸ್ತ್ರದಲ್ಲಿ ಅರಣ್ಯ ನಿರ್ವಹಣೆ, ಅರಣ್ಯಮಾಪನ (ಡಿಥಿ), ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಪರಿಸರ ತತ್ವಗಳು, ಮಣ್ಣಿನ ವಿಜ್ಞಾನ, ನೀರಿನ ಸಂಪನ್ಮೂಲ ನಿರ್ವಹಣೆ ಮುಂತಾದ ಅರಣ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ಕಲಿಯುತ್ತೇವೆ. ಅರಣ್ಯದ ಒಳಹೃದಯವನ್ನು ಅರಿತು ಕೆಲಸ ಮಾಡುವ ತರಬೇತಿ ಪಡೆದವರು. ಅರಣ್ಯದ ಕೆಲಸವನ್ನು ಅರಣ್ಯವನ್ನು ಅರಿತವರಿಗೇ ನೀಡಬೇಕು ಎಂದು ಒತ್ತಾಯಿಸಿದರು.
2003ರಲ್ಲಿ ಕರ್ನಾಟಕ ಸರ್ಕಾರವು ಅರಣ್ಯ ಶಾಸ್ತ್ರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಶೇ.50 ಮೀಸಲಾತಿ ನಿಗದಿಪಡಿಸಿತು. 2012ರಲ್ಲಿ ಈ ಮೀಸಲಾತಿಯನ್ನು ಶೇ.75ಹೆಚ್ಚಿಸಿ 2018ರಲ್ಲಿ ಅರಣ್ಯ ಇಲಾಖೆಯ ನೇರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಶೇ.50ಕ್ಕೆ ಇಳಿಸುವ ಮೂಲಕ ಅರಣ್ಯ ಪದವೀಧರರ ವೃತ್ತಿ ನಿರೀಕ್ಷೆಗಳು ಮತ್ತು ವೃತ್ತಿಪರತೆ ನಂಬಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಆದ್ದರಿಂದ 1988ರ ಭಾರತೀಯ ಅರಣ್ಯ ಆಯೋಗದ ಶಿಫಾರಸುಗಳನ್ನು ತಕ್ಷಣ ಜಾರಿಗೆ ತರಬೇಕು, ಇತರ ವಿಭಾಗದ ಪದವೀಧರರಿಗೆ ಅರಣ್ಯ ಹುದ್ದೆಗಳಲ್ಲಿ ಅವಕಾಶ ನೀಡಬಾರದು, ಅರಣ್ಯ ಶಿಕ್ಷಣದ ಗೌರವ ಮತ್ತು ತಾಂತ್ರಿಕತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುದೀಪ್ ಸಿರಿಗೌಡ, ಕಾರ್ಯದರ್ಶಿಗಳಾದ ಅಂಕಿತ್‌ದೇವರಾಯ, ಎ.ಜಿ.ವಿಕಾಸ್, ಜಂಟಿ ಕಾರ್ಯದರ್ಶಿ ರಾಘವೇಂದ್ರ ಎಸ್.ಎಂ.ಕಿಶನ್‌ಗೌಡ, ಖಜಾಂಚಿ ಎಂ.ಯಶಸ್ಸು, ಡಿ.ಎಂ.ಮಂಜುನಾಥ್, ಸಂಚಾಲಕರಾದ ಅನುಷಾ ಸುರೇಶ್, ಆಕಾಶ್ ಪೂಜಾರಿ, ಪದಾಧಿಕಾರಿಗಳಾದ ನಿಶಾಂತ್, ಗಣೇಶ್, ಸಂಗೀತಾ, ರಾಕೇಶ್, ಮಾರುತಿ, ಅಮೃತಾ, ಮೋನಿಕಾ, ವೈಷ್ಣವಿ, ಕಿಶೋರ್, ಶ್ರೀಶೈಲ್ ಮುಂತಾದವರು ಉಪಸ್ಥಿತರಿದ್ದರು.