

ಹಿರೇಕೆರೂರ: ಹಾಲಿನ ದರ ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹಾಲಿನ ದರ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಜೆಟ್ನಲ್ಲಿ 100 ಹೊಸ ಪಶು ಆಸ್ಪತ್ರೆ ಪ್ರಾರಂಭಿಸಲು ಸಿಎಂ ಅವರಿಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ ಹೇಳಿದರು.
ತಾಲೂಕಿನ ಕಚವಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಪಶು ಚಿಕಿತ್ಸಾಲಯ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಪಶು ಚಿಕಿತ್ಸಾಲಯದ ಸ್ಥಾಪನೆ ಇಂದು ಈಡೇರಿದೆ. ಶಾಸಕ ಯು.ಬಿ. ಬಣಕಾರ ಅವರು ಕಚವಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಅವಶ್ಯಕತೆ ಇದೆ ಎಂದು ಒತ್ತಾಯ ಮಾಡಿ ಮಂಜೂರು ಮಾಡಿಸಿದ್ದಾರೆ. ಬರುವ ಏಪ್ರಿಲ್ ನಂತರ ಈ ಪಶು ಚಿಕಿತ್ಸಾಲಯಕ್ಕೆ ನೂತನ ಕಟ್ಟಡ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 250 ಪಶುವೈದ್ಯ ಪರೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 400 ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. 400 ಕಾಯಂ ಪಶು ವೈದ್ಯರ ನೇಮಕ ಮಾಡಿಕೊಳ್ಳಲು ಕೆಪಿಎಸ್ಸಿಗೆ ತಿಳಿಸಲಾಗಿದೆ. 800 ವೈದ್ಯರನ್ನು ನೇಮಕ ಮಾಡಿಕೊಂಡರೂ ವೈದ್ಯರ ಕೊರತೆ ಇದ್ದು, ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಚವಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಪ್ರಾರಂಭವಾಗಿರುವುದರಿಂದ ತಾಲೂಕಿನ ಗಡಿ ಭಾಗದ ಹಳ್ಳಿಗಳ ರೈತರಿಗೆ ಅನಕೂಲವಾಗಲಿದೆ. ರೈತರು ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ರಮೇಶ ಮಡಿವಾಳರ, ಗ್ರಾಪಂ ಅಧ್ಯಕ್ಷೆ ಲಲಿತವ್ವ ರ್ಬಾ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ.ಮಂಜುನಾಥ ಪಾಳೆಗಾರ, ಜಂಟಿ ನಿರ್ದೇಶಕ ಡಾ.ಬಿ.ಎಲ್. ಪರಮೆಶ್ವರನಾಯ್ಕ, ಉಪ ನಿರ್ದೇಶಕ ಡಾ.ಎಸ್.ವಿ. ಸಂತಿ, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕಿರಣ್ ಎಲ್., ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ನಾಗಪ್ಪನವರ, ನಿರ್ದೇಶಕ ಸಂತೋಷ ಬಾಸೂರ, ಗ್ರಾಪಂ ಉಪಾಧ್ಯಕ್ಷೆ ಹೊನ್ನಮ್ಮ ಆಲದಕಟ್ಟಿ, ಸದಸ್ಯರು, ಗ್ರಾಮಸ್ಥರು, ಇಲಾಖೆ ಸಿಬ್ಬಂದಿ ಇದ್ದರು.