

ಮರಿದೇವ ಹೂಗಾರ ಹುಬ್ಬಳ್ಳಿ
ಉತ್ತರ ಕರ್ನಾಟಕದ ಅತಿದೊಡ್ಡ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ 100 ಕೆಜಿ ಬೆಳ್ಳಿ ಅಂಬಾರಿ ನಿರ್ವಣಕ್ಕೆ ಭರದ ಸಿದ್ಧತೆ ನಡೆದಿದೆ. ಬರುವ ಶಿವರಾತ್ರಿಗೆ ಉಭಯಶ್ರೀಗಳ ಮೂರ್ತಿಗಳ ಮೆರವಣಿಗೆ ಇದೇ ಅಂಬಾರಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯು ಎರಡು ವರ್ಷಗಳ ಹಿಂದೆ ಈ ಸಂಕಲ್ಪ ತೊಟ್ಟಿತ್ತು. ಈಗ ಅದು ಕಾರ್ಯಗತಗೊಳ್ಳುತ್ತಿದೆ. ಭಕ್ತರು ಕೊಟ್ಟ ದೇಣಿಗೆಯಲ್ಲಿಯೇ ಬೆಳ್ಳಿ ಅಂಬಾರಿ ನಿರ್ಮಾಣ ನಡೆಯುತ್ತಿದ್ದು, ಒಂದು ವೇಳೆ ಕಡಿಮೆ ಬಿದ್ದರೆ ಶ್ರೀಮಠದಿಂದಲೂ ಹೆಚ್ಚುವರಿಯಾಗಿ ಬೆಳ್ಳಿ ಸಮರ್ಪಣೆಯಾಗಲಿದೆ.
ಈಗಾಗಲೇ ಗೋಕಾಕದ ಈಶ್ವರಪ್ಪ ಸಿದ್ದಪ್ಪ ಸೀಗಿಹಳ್ಳಿ (ವಕೀಲರು) ಅವರು ಸಾಗವಾನಿ ಕಟ್ಟಿಗೆಯಿಂದ ತಯಾರಿಸಿಕೊಟ್ಟಿರುವ ಆನೆ, ಅದರ ಮೇಲೆ ಅಂಬಾರಿ ಇದೆ. ಇದಕ್ಕೆ ಬೆಳ್ಳಿ ಲೇಪನ ಕಾರ್ಯ ನಡೆಯಬೇಕು. ಬೆಳ್ಳಿ ಸಂಗ್ರಹ ವಿಳಂಬವಾದ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ಶುರುವಾಗಿರಲಿಲ್ಲ. ಈಗ ಸದ್ಯ 50 ಕೆಜಿ ಬೆಳ್ಳಿ ಸಂಗ್ರಹವಾಗಿದ್ದು, ಇನ್ನಷ್ಟು ಭಕ್ತರು ಬೆಳ್ಳಿ ಕೊಡುವುದಾಗಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಕ್ಕಸಾಲಿಗರ ಓಣಿಯ ಹಿರಿಯ ಕಲಾವಿದ ಅಶೋಕ ಬೆಳ್ಳಿಗಟ್ಟಿ ನೇತೃತ್ವದ 6 ಜನರ ತಂಡ ವಾರದೊಳಗೆ ಬೆಳ್ಳಿ ಅಂಬಾರಿ ನಿರ್ವಣಕ್ಕೆ ಸಜ್ಜುಗೊಳ್ಳಲಿದೆ.
ಕೆಳಗೆ ಕಟ್ಟಿಗೆ ಆನೆ ಇದೆ. ಅದರ ಮೇಲೆ ಎರಡು ಮಂಟಪಗಳಿವೆ. ಇದಕ್ಕೆ ಬೆಳ್ಳಿ ಲೇಪನ ಆಗಲಿದೆ. ಮುಂದಿನ ಮಂಟಪದಲ್ಲಿ ಶ್ರೀ ಗುರುನಾಥಾರೂಢರು, ಮೇಲಿನ (ಮುಖ್ಯ) ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಮಂಟಪದ ಬಲ ಮತ್ತು ಎಡಗಡೆ ನಂದಿಯನ್ನು ಕೆತ್ತನೆ ಮಾಡಲಾಗಿದೆ. ಒಟ್ಟಾರೆ 100 ಕೆಜಿ ಬೆಳ್ಳಿ ಇದಕ್ಕೆ ಬಳಕೆಯಾಗಲಿದೆ. ಈ ಅಂಬಾರಿಯನ್ನು ಭಕ್ತರೇ ಎಳೆಯಬಹುದು. ಮುಂದೆ ಹೋಗದಂತೆ ಹ್ಯಾಂಡ್ ಬ್ರೇಕ್ ಅಳವಡಿಸಲಾಗಿದೆ.
ಪ್ರತಿ ಸೋಮವಾರ, ಪಲ್ಲಕ್ಕಿ ಉತ್ಸವ, ಶ್ರೀರಾಮ ನವಮಿ, ಸಪ್ತಾಹ, ಅಮಾವಾಸ್ಯೆ, ಶಿವರಾತ್ರಿ ಹಾಗೂ ಅಜ್ಜನ ಜಾತ್ರೆ ವೇಳೆ ಅಂಬಾರಿ ಮೆರವಣಿಗೆ ನಡೆಯಲಿದೆ. ಜಾತ್ರೆ ವೇಳೆ ರಥದ ಮುಂದೆ ಅಂಬಾರಿಯನ್ನು ತೆಗೆದುಕೊಂಡು ಹೋಗಲು ನಿಶ್ಚಯಿಸಲಾಗಿದೆ. ಒಟ್ಟಾರೆಯಾಗಿ ಶ್ರೀಮಠದಲ್ಲಿ ಪೂಜೆ, ಸಂಭ್ರಮಾಚರಣೆ ನಡೆಯುವ ವೇಳೆ ಈ ಅಂಬಾರಿಯು ಕಾರ್ಯಪ್ರವೃತ್ತವಾಗಲಿದೆ.
ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದಲ್ಲಿ ಸಕ್ರಿಯರಾಗಿರುವ ಹಿರಿಯ ಕಲಾವಿದ ಅಶೋಕ ಬೆಳ್ಳಿಗಟ್ಟಿ ಅವರೇ ಈ ಅಂಬಾರಿ ನಿರ್ವತೃ. ಶ್ರೀಮಠದ ಟ್ರಸ್ಟ್ ಕಮಿಟಿಯು ಮಠದಲ್ಲಿ ಯಾವುದೇ ಬೆಳ್ಳಿ ಮೂರ್ತಿ, ಮಂಟಪ ತಯಾರಿಸುವುದು ಇದ್ದರೆ ಇವರನ್ನೇ ಆಯ್ಕೆ ಮಾಡುತ್ತದೆ. ಹಾಗಾಗಿಯೇ ಈ ಬಾರಿ 100 ಕೆಜಿ ಬೆಳ್ಳಿ ಅಂಬಾರಿಯನ್ನು ನಿರ್ವಿುಸಲು ಇವರಿಗೆ ವಹಿಸಿಕೊಟ್ಟಿದೆ. ಅಶೋಕ ಬೆಳ್ಳಿಗಟ್ಟಿ ಅವರು 20 ವರ್ಷದಿಂದ ಬೆಳ್ಳಿ ಮತ್ತು ಬಂಗಾರದ ಕುಸುರಿ ಕೆತ್ತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ 42 ಕೆಜಿ ತೂಕದ ಬೆಳ್ಳಿ ಮಂಟಪ, 35 ಕೆಜಿ ಪಲ್ಲಕ್ಕಿ, 11ಕೆಜಿ ತೊಟ್ಟಿಲು, 30 ಕೆಜಿ ಪ್ರಭಾವಳಿ ನಿರ್ವಿುಸಿಕೊಟ್ಟಿದ್ದಾರೆ. ಬೆಳಗಾವಿ, ಹಾವೇರಿ, ಗದಗ, ದಾವಣಗೆರೆ ಸೇರಿ ಇತರ ಜಿಲ್ಲೆಗಳಲ್ಲಿ ಬೆಳ್ಳಿ ಮತ್ತು ಬಂಗಾರದ ಮೂರ್ತಿ, ಮಂಟಪ, ಪ್ರಭಾವಳಿ ಸೇರಿದಂತೆ ಇತರ ಕುಸುರಿ ಕೆಲಸವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
100 ಕೆಜಿ ಬೆಳ್ಳಿ ಅಂಬಾರಿ ನಿರ್ವಿುಸಬೇಕೆಂಬ ಸಂಕಲ್ಪ ಹೊಂದಿದ್ದೆವು. ಈಗ ಅದು ಕಾರ್ಯಗತವಾಗುತ್ತಿದೆ. ಭಕ್ತರು ಬೆಳ್ಳಿ ದೇಣಿಗೆ ನೀಡುತ್ತಿದ್ದಾರೆ. ಬರುವ ಶಿವರಾತ್ರಿಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಅಶೋಕ ಬೆಳ್ಳಿಗಟ್ಟಿ ನೇತೃತ್ವದ ತಂಡ ವಾರದೊಳಗೆ ಅಂಬಾರಿ ನಿರ್ವಣವನ್ನು ಆರಂಭಿಸಲಿದೆ. -ಬಸವರಾಜ ಕಲ್ಯಾಣಶೆಟ್ಟರ್, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್