

ಕಡೂರು: ಪಟ್ಟಣದಲ್ಲಿ ಜು.1ರಿಂದ ಪುರಸಭೆ ಅಧಿಕಾರಿಗಳ ತಂಡ ಹಮ್ಮಿಕೊಂಡಿರುವ ಪ್ಲಾಸ್ಟಿಕ್‌ಮುಕ್ತ ಅಭಿಯಾನದಲ್ಲಿ ಇದುವರೆಗೂ ಸುಮಾರು 100 ಕೆಜಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ಅಂಗಡಿಮುಂಗಟ್ಟುಗಳಿಂದ ವಶಪಡಿಸಿಕೊಳ್ಳಲಾಗಿದೆ.
ಗುರುವಾರವೂ ಕಾರ್ಯಾಚರಣೆ ಮುಂದುವರಿಸಿದ ಪುರಸಭೆ ಮುಖ್ಯಾಧಿಕಾರಿ ಕೆ.ರುದ್ರೇಶ್ ನೇತೃತ್ವದ ತಂಡ ಪಟ್ಟಣದ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕವರ್ ಹಾಗೂ ಲೋಟದ ಬಂಡಲ್‌ಗಳನ್ನು ವಶಪಡಿಸಿಕೊಂಡಿತು.
ಕಾರ್ಯಾಚರಣೆ ಕುರಿತು ಪತ್ರಿಕೆಯೊಂದಿಗೆ ಕೆ.ರುದ್ರೇಶ್ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಜು.28ರವರೆಗೆ ಪ್ಲಾಸ್ಟಿಕ್‌ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಇದುವರೆಗೂ 3 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. ಪೌರಕಾರ್ಮಿಕರಿಗೂ ಪ್ಲಾಸ್ಟಿಕ್‌ಮುಕ್ತಗೊಳಿಸುವ ತರಬೇತಿ ನೀಡಲಾಗಿದೆ ಎಂದರು.
ಪುರಸಭೆ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಪೌರ ಕಾರ್ಮಿಕರು ಕಾರ್ಯಾಚರಣೆಯಲ್ಲಿದ್ದರು.