ಬಿಎಂಟಿಸಿ ಬಸ್​ನಲ್ಲಿ ಮಾಸ್ಕ್​ ಧರಿಸದವರಿಗೆ 100 ರೂ. ದಂಡ

Mask
Published on

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣಕ್ಕಗಿ ಬಿಎಂಟಿಸಿ ಬಸ್​ ಪ್ರಯಾಣದ ವೇಳೆ ಮಾಸ್ಕ್​ ಧರಿಸದ ಪ್ರಯಾಣಿಕರಿಗೆ 100 ರೂ. ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಜಾರಿಗೆ ನಿಗಮ ಮುಂದಾಗಿದೆ.


ಲಾಕ್​ಡೌನ್​ ಸಡಿಲಿಕೆ ಬಳಿಕ ಬಸ್​ ಸಂಚಾರ ಪುನರಾರಂಭವಾದ ಬೆನ್ನಲ್ಲೇ ನಿಗಮವು ಬಸ್​ ಪ್ರಯಾಣದ ವೇಳೆ ಪ್ರಯಾಣಿಕರು ಮಾಸ್ಕ್​ ಧರಿಸುವುದು ಹಾಗೂ ವ್ಯಕ್ತಿಗತ ಅಂತರ ಕಾಪಾಡುವುದು ಕಡ್ಡಾಯಗೊಳಿಸಿತ್ತು. ಆದರೆ, ಹಲವು ಪ್ರಯಾಣಿಕರು ಬಸ್​ ಹತ್ತಿದ ತಕ್ಷಣ ಮಾಸ್ಕ್​ ತೆಗೆದಿಡುವುದು ಹೆಚ್ಚಾಗಿತ್ತು. ನಿರ್ವಾಹಕರು ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಂತೆ ಸೂಚಿಸಿದರೂ, ಅದಕ್ಕೆ ಪ್ರಯಾಣಿಕರು ಪ್ರತಿಕ್ರಿಯಿಸುತ್ತಿರಲಿಲ್ಲ. ಕೆಲವು ಸಲ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಗದ್ದಲವೂ ನಡೆದಿತ್ತು. ಅಂತಹ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಬಿಎಂಟಿಸಿ, ಪ್ರಯಾಣದ ವೇಳೆ ಮಾಸ್ಕ್​ ಧರಿಸದ ಪ್ರಯಾಣಿಕರಿಗೆ 100 ರೂ. ದಂಡ ವಿಧಿಸುವಂತೆ ಮಾರ್ಗ ತಪಾಸಣಾ ಸಿಬ್ಬಂದಿಗೆ ಸೂಚಿಸಿದೆ.


ಈ ಹಿನ್ನೆಲೆಯಲ್ಲಿ ತಪಾಸಣಾ ತಂಡಗಳು ಮಾರ್ಗಗಳಲ್ಲಿ ಬಸ್​ ಪರಿಶೀಲಿಸಿ, ಮಾಸ್ಕ್​ ಧರಿಸದ ಪ್ರಯಾಣಿಕರಿಗೆ ದಂಡ ವಸೂಲಿಗೆ ಮುಂದಾಗಿದೆ. ಮಾಸ್ಕ್​ ಧರಿಸದ ಪ್ರಯಾಣಿಕರಿಗೆ ಮುಲಾಜಿಲ್ಲದೆ ದಂಡ ವಿಧಿಸುವಂತೆ ತಪಾಸಣಾ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net